ಕ್ರೀಡೆ

Champions Trophy ಆಡಲು ಭಾರತ ಪಾಕ್​ಗೆ ಪ್ರಯಾಣಿಸುತ್ತ; BCCIನಿಂದ ಹೊರಬಿತ್ತು ಮೇಜರ್​ ಅಪ್ಡೇಟ್​

ಕಾನ್ಪುರ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ (Champions Trophy) ಶುರುವಾಗುವುದಕ್ಕೂ ಮುನ್ನವೇ ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾ ಲೋಕದಲ್ಲಿ ಸದ್ದು ಮಾಡುತ್ತಿದ್ದು, ಚರ್ಚಾ ವಿಷಯವಾಗಿದೆ. ಭಾರತ (India) ಹಾಗೂ ಪಾಕಿಸ್ತಾನ (Pakistan)ನಡುವಿನ ರಾಜತಾಂತ್ರಿಕ ವಿಚಾರವಾಗಿ ಚಾಂಪಿಯನ್ಸ್​ ಟ್ರೋಫಿ ಸಖತ್​ ಸೌಂಡ್​ ಮಾಡುತ್ತಿದ್ದು, ಹಾಲಿ ರನ್ನರ್​ ಅಪ್​ ಭಾರತ ಭದ್ರತೆಯ ಕಾರಣ ನೀಡಿ ಪಾಕ್​ ನೆಲದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಹೇಳಿದೆ.

ಇತ್ತ ಭಾರತ ಚಾಂಪಿಯನ್ಸ್​ ಟ್ರೋಫಿ ಆಡುವ ಕುರಿತು ಬಿಸಿಸಿಐನಿಂದ (BCCI) ಮಹತ್ವದ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಈ ಬಗ್ಗೆ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಮಾತನಾಡಿದ್ದಾರೆ. ಇತ್ತ ಬಿಸಿಸಿಐನ ಈ ನಿರ್ಧಾರ ಪಾಕ್​ಗೆ ನಡುಕವನ್ನು ಹುಟ್ಟಿಸಿದ್ದು, ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಹೇಳುವ ಮೂಲಕ ಮತ್ತೊಂದು ಯೋಜನೆ ರೂಪಿಸುತ್ತಿದೆ.

ಕಾನ್ಪುರದಲ್ಲಿ ಈ ಕುರಿತು ಮಾತನಾಡಿರುವ ರಾಜೀವ್​ ಶುಕ್ಲಾ, ಭಾರತ ಪಾಕ್​ ನೆಲದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡುವ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಂತಾರಾಷ್ಟ್ರೀಯ ಪ್ರವಾಸಗಳಿಗೆ ನಾವು ಯಾವಾಗಲೂ ಸರ್ಕಾರದ ಅನುಮತಿ ಪಡೆಯುವುದು ಬಿಸಿಸಿಐ ನೀತಿ. ಟೀಮ್​ ಇಂಡಿಯಾ ಹೋಗಬೇಕಾ, ಬೇಡವಾ ಎಂಬುದು ಸರ್ಕಾರ ನಿರ್ಧರಿಸುತ್ತದೆ. ಅದೇ ರೀತಿ ಚಾಂಪಿಯನ್ಸ್​​ ಟ್ರೋಫಿ ವಿಚಾರದಲ್ಲೂ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ತಿಳಿಸಿದ್ದಾರೆ.

ಇತ್ತ ಭಾರತ ತಮ್ಮ ನೆಲದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡಿದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಇದ್ದು, ಇದಕ್ಕಾಗಿ ಲಾಹೋರ್​ನಲ್ಲಿರುವ ಗಡಾಫಿ ಕ್ರೀಡಾಂಗಣವನ್ನು ಪಿಸಿಬಿ ನವೀಕರಣ ಮಾಡಿಸುತ್ತಿದೆ. ಇದಲ್ಲದೆ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುವುದಾಗಿ ತಿಳಿಸಿದೆ. ಈ ಬಗ್ಗೆ ಬಿಸಿಸಿಐ ನಿರ್ಧಾರವನ್ನು ಪ್ರಕಟಿಸಬೇಕಿದ್ದು, ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕುಬ ಭೀತಿಯಲ್ಲಿ ಪಾಕ್​ ಕ್ರಿಕೆಟ್​ ಮಂಡಳಿ ಇದೆ.