ಕ್ರೀಡೆ

ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ: ವಾಷಿಂಗ್ಟನ್ ಡ್ರೀಮ್ ಕಂಬ್ಯಾಕ್

ಪುಣೆ: ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತಮಿಳುನಾಡು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (58ಕ್ಕೆ 7) ನಡೆಸಿದ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಮೊದಲ ದಿನದ ಗೌರವ ಸಂಪಾದಿಸಿದೆ. ಪುಣೆಯಲ್ಲಿ ಪುಟಿದೇಳುವ ಮೂಲಕ ಟೀಮ್ ಇಂಡಿಯಾ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಪ್ರಾಬಲ್ಯವನ್ನು ವಿಸ್ತರಿಸುವ ಭರವಸೆ ಮೂಡಿಸಿದೆ.

ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ಟೆಸ್ಟ್‌ನಲ್ಲಿ ಮಿಂಚಿದ್ದ ಎಡಗೈ ಆರಂಭಿಕ ಡೆವೋನ್ ಕಾನ್‌ವೇ (76 ರನ್, 141 ಎಸೆತ, 11 ಬೌಂಡರಿ) ಹಾಗೂ ಆಲ್ರೌಂಡರ್ ರಚಿನ್ ರವೀಂದ್ರ (65 ರನ್, 105 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಕಿವೀಸ್ ಮಧ್ಯಾಹ್ನದವರೆಗೂ ಸುಸ್ಥಿತಿಯಲ್ಲಿತ್ತು. ಬಳಿಕ ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿದ ಕಿವೀಸ್ ಚಹಾ ವಿರಾಮದ ಬಳಿಕ 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ನಾಯಕ ರೋಹಿತ್ ಶರ್ಮ (0) ವಿಕೆಟ್ ಕಳೆದುಕೊಂಡಿರುವ ಭಾರತ ದಿನದಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಕಲೆಹಾಕಿದೆ. ಭಾರತ ಸದ್ಯ 243 ರನ್ ಹಿನ್ನಡೆಯಲ್ಲಿದ್ದು, ಯಶಸ್ವಿ ಜೈಸ್ವಾಲ್ (6*) ಜತೆ ಶುಭಮಾನ್ ಗಿಲ್ (10*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಾಷಿಂಗ್ಟನ್ ಡ್ರೀಮ್ ಕಂಬ್ಯಾಕ್: ಬೆಂಗಳೂರು ಟೆಸ್ಟ್ ಸೋಲಿನ ಬಳಿಕ 25 ವರ್ಷದ ಆ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ಅಚ್ಚರಿಯ ರೀತಿಯಲ್ಲಿ ಭಾರತ ತಂಡಕ್ಕೆ ಸೇರಿಸಿಕೊಂಡ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರ ಪುಣೆಯಲ್ಲಿ ಲ ನೀಡಿತು. ಕಾನ್‌ವೇ ನಿರ್ಗಮನದ ಬಳಿಕ ರಚಿನ್ ರವೀಂದ್ರ ಜತೆಯಾದ ಡೆರಿಲ್ ಮಿಚೆಲ್ (18) ಉಪಯುಕ್ತ ಜತೆಯಾಟವಾಡಿದರು. ರಚಿನ್ ಟೆಸ್ಟ್‌ನಲ್ಲಿ 4ನೇ ಅರ್ಧಶತಕ ಗಳಿಸಿದರು. ಈ ವೇಳೆಗೆ ನ್ಯೂಜಿಲೆಂಡ್ 3 ವಿಕೆಟ್‌ಗೆ 197 ರನ್‌ಗಳಿಸಿ ಸುಸ್ಥಿಯಲ್ಲಿತ್ತು.

ಬಳಿಕ ಕಿವೀಸ್ ಏಳು ವಿಕೆಟ್‌ಗಳು ವಾಷಿಂಗ್ಟನ್ ಸುಂದರ್ ಪಾಲಾದವು. ರಚಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ವಾಷಿಂಗ್ಟನ್ ನಂತರ ಟಾಮ್ ಬ್ಲಂಡೆಲ್ (3), ಗ್ಲೆನ್ ಫಿಲಿಪ್ಸ್ (9) ವಿಕೆಟ್ ಉರುಳಿಸದರು. ಮಿಚೆಲ್ ಸ್ಯಾಂಟ್ನರ್ (33) ಕೆಳಕ್ರಮಾಂಕ ಬ್ಯಾಟರ್‌ಗಳ ಜತೆಗೂಡಿ ಮೊತ್ತ ಏರಿಸಿದರು. ಟಿಮ್ ಸೌಥಿ (5), ಎಜಾಜ್ ಪಟೇಲ್ (4) ವಾಷಿಂಗ್ಟನ್ ದಾಳಿಯ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮ ಏಳು ವಿಕೆಟ್‌ಗಳನ್ನು 62 ರನ್ ಅಂತರದಲ್ಲಿ ಕಬಳಿಸಿದ ಭಾರತ, ಕಿವೀಸ್ ಇನಿಂಗ್ಸ್‌ಗೆ ತೆರೆ ಎಳೆಯಿತು. ಮೊದಲ 13 ಓವರ್‌ಗಳಲ್ಲಿ ವಿಕೆಟ್‌ಲೆಸ್ ಆಗಿದ್ದ ವಾಷಿಂಗ್ಟನ್ ತನ್ನ ನಂತರದ 61 ಎಸೆತಗಳ ಅಂತರದಲ್ಲಿ ಈ 7 ವಿಕೆಟ್‌ಗಳನ್ನು ಉರುಳಿದರು. ಈ ಪೈಕಿ ಐವರು ಬ್ಯಾಟರ್‌ಗಳನ್ನು ಕ್ಲೀನ್‌ಬೌಲ್ಡ್ ಮಾಡಿದರು.