ದುಬೈ: ಐಸಿಸಿ ರ‍್ಯಾಂಕಿಂಗ್ ಶುಕ್ರವಾರ ವಾರ್ಷಿಕ ಪರಿಷ್ಕರಣೆಗೆ ಒಳಗಾಗಿದ್ದು, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಸ್ಟ್ರೆಲಿಯಾ ಟೆಸ್ಟ್ನಲ್ಲಿ ನೂತನ ವಿಶ್ವ ನಂ. 1 ತಂಡವಾಗಿದ್ದರೆ, ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದೆ.
ರ್ಯಾಂಕಿಂಗ್ನ ವಾರ್ಷಿಕ ಪರಿಷ್ಕರಣೆಯಲ್ಲಿ 2020-21ರ ಋತುವಿನ ಫಲಿತಾಂಶಗಳನ್ನು ಕೈಬಿಡಲಾಗಿದೆ. 2021ರ ಮೇ ನಂತರದ ಎಲ್ಲ ಸರಣಿಗಳನ್ನು ರ್ಯಾಂಕಿಂಗ್ಗೆ ಪರಿಗಣಿಸಲಾಗಿದೆ. 2020-21ರ ಸಾಲಿನಲ್ಲಿ ಭಾರತ ತಂಡ ಆಸೀಸ್ ವಿರುದ್ಧ 2-1ರಿಂದ ಸರಣಿ ಗೆದ್ದಿರುವುದನ್ನು ರ್ಯಾಂಕಿಂಗ್ನಿಂದ ಕೈಬಿಟ್ಟಿರುವುದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಟೆಸ್ಟ್ನಲ್ಲಿ ಆಸ್ಟ್ರೆಲಿಯಾ 124 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 120 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ 3ರಿಂದ 9ನೇ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಗ್ಲೆಂಡ್ (105), ದ. ಆಫ್ರಿಕಾ (103) ಮತ್ತು ನ್ಯೂಜಿಲೆಂಡ್ (96) ತಂಡಗಳು ಕ್ರಮವಾಗಿ 3, 4 , 5ನೇ ಸ್ಥಾನದಲ್ಲಿವೆ.
ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌ನಲ್ಲಿ ಪರಿಷ್ಕರಣೆಯ ಬಳಿಕ 2023ರ ಮೇಗಿಂತ ಮೊದಲಿನ ಫಲಿತಾಂಶಗಳಿಗೆ ಶೇ. 50 ಅಂಕ ಮತ್ತು ನಂತರದ ಫಲಿತಾಂಶಗಳಿಗೆ ಶೇ. 100 ಅಂಕಗಳನ್ನು ನೀಡಲಾಗಿದೆ. ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸೀಸ್ಗೆ (116) ಸೋತಿದ್ದ ನಡುವೆ ಭಾರತದ (122) ಮುನ್ನಡೆ 3ರಿಂದ 6 ಅಂಕಗಳಿಗೆ ವಿಸ್ತರಿಸಿದೆ. ಏಕದಿನ ರ್ಯಾಂಕಿಂಗ್ನ ಅಗ್ರ 10ರಲ್ಲಿ ಯಾವುದೇ ತಂಡಗಳ ಸ್ಥಾನ ಪಲ್ಲಟವಾಗಿಲ್ಲ.
ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತ 264 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದಿರುವ ನಡುವೆ ಇತರ ತಂಡಗಳ ಸ್ಥಾನ ಬದಲಾವಣೆ ಕಂಡಿದೆ. ಆಸೀಸ್ 257 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್ 252 ಅಂಕಗಳೊಂದಿಗೆ 3ನೇ ಸ್ಥಾನಕ್ಕಿಳಿದಿದೆ. ದ. ಆಫ್ರಿಕಾ (250) 6ರಿಂದ 4ನೇ ಸ್ಥಾನಕ್ಕೇರಿದ್ದರೆ, ನ್ಯೂಜಿಲೆಂಡ್ (250) 5ನೇ ಸ್ಥಾನಕ್ಕಿಳಿದಿದೆ. ವೆಸ್ಟ್ ಇಂಡೀಸ್ (249) 6ನೇ ಸ್ಥಾನಕ್ಕೇರಿದ್ದರೆ, ಪಾಕಿಸ್ತಾನ (247) 5ರಿಂದ 7ನೇ ಸ್ಥಾನಕ್ಕೆ ಕುಸಿದಿದೆ.