ಕ್ರೀಡೆ

ಟೆಸ್ಟ್​ ಕ್ರಿಕೆಟ್​ನಲ್ಲಿ 112 ವರ್ಷ ಹಿಂದಿನ ಸಾಧನೆ ಪುನರಾವರ್ತಿಸಿದ ಭಾರತ!

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧ 4-1ರಿಂದ ಸರಣಿ ಗೆದ್ದ ಭಾರತ ತಂಡ ಟೆಸ್ಟ್​ ಕ್ರಿಕೆಟ್​ನಲ್ಲಿ 112 ವರ್ಷ ಹಿಂದಿನ ವಿಶಿಷ್ಟ ಸಾಧನೆಯೊಂದನ್ನು ಸರಿಗಟ್ಟಿದೆ. 1912ರಲ್ಲಿ ಇಂಗ್ಲೆಂಡ್​ ತಂಡ ಆಸೀಸ್​ ಎದುರು ಸರಣಿಯ ಮೊದಲ ಟೆಸ್ಟ್​ ಸೋತ ಬಳಿಕ ಸತತ 4 ಟೆಸ್ಟ್​ ಗೆದ್ದಿತ್ತು. ಭಾರತವೂ ಈಗ ಸರಣಿಯ ಮೊದಲ ಟೆಸ್ಟ್​ ಸೋಲಿನ ಬಳಿಕ ಸತತ 4 ಜಯ ಕಂಡಿದೆ. 1897-98 ಮತ್ತು 1901-02ರಲ್ಲಿ ಆಸೀಸ್​ ತಂಡವೂ ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ ಸೋತ ಬಳಿಕ ಸತತ 4 ಟೆಸ್ಟ್​ ಗೆದ್ದಿತ್ತು.

ಭಾರತದ ಸೋಲು-ಗೆಲುವು ಸಮ

ಭಾರತ ಈಗ 579ನೇ ಟೆಸ್ಟ್​ ಪಂದ್ಯದಲ್ಲಿ ಸೋಲು&ಗೆಲುವಿನ ಸಮಬಲ ಕಂಡಿದೆ. ಭಾರತ ಈಗ ತಲಾ 178 ಗೆಲುವು&ಸೋಲು ಕಂಡಿದೆ. ಉಳಿದಂತೆ 222 ಟೆಸ್ಟ್​ ಡ್ರಾಗೊಂಡಿದ್ದರೆ, 1 ಟೆಸ್ಟ್​ ಟೈ ಆಗಿದೆ. ಮೊದಲ ಟೆಸ್ಟ್​ ಜಯಕ್ಕಾಗಿ 25ನೇ ಟೆಸ್ಟ್​ವರೆಗೆ ಕಾದಿದ್ದ ಭಾರತ, 2001ರ ನಂತರದಲ್ಲಿ ಕಂಡ 117ನೇ ಜಯ ಇದಾಗಿದೆ. ಭಾರತ ಈಗಾಗಲೆ ಏಕದಿನ (559 ಜಯ, 443 ಸೋಲು) ಮತ್ತು ಟಿ20ಯಲ್ಲಿ (140 ಜಯ, 68 ಸೋಲು) ಸೋಲಿಗಿಂತ ಅಧಿಕ ಗೆಲುವಿನ ದಾಖಲೆ ಹೊಂದಿದೆ.

ಡಬ್ಲ್ಯುಟಿಸಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ಭಾರತ

ಭಾರತ ತಂಡ ಜಯದೊಂದಿಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತದ ಅಂಕ ಈಗ ಶೇ. 68.51ಕ್ಕೆ ಏರಿಕೆಯಾಗಿದೆ. ನ್ಯೂಜಿಲೆಂಡ್​ (ಶೇ.60) ಮತ್ತು ಆಸ್ಟ್ರೆಲಿಯಾ (ಶೇ. 59.09) ಸದ್ಯ 2 ಮತ್ತು 3ನೇ ಸ್ಥಾನದಲ್ಲಿದ್ದು, ಇವೆರಡು ತಂಡಗಳ 2ನೇ ಟೆಸ್ಟ್​ ಪಂದ್ಯದ ಬಳಿಕ ಈ ಸ್ಥಾನ ಏರುಪೇರಾಗುವ ಸಾಧ್ಯತೆ ಇದೆ.

ಸವಾಲಾಗದ ಬಾಜ್​ಬಾಲ್​

ಸರಣಿಗೆ ಮುನ್ನ ಆಂಗ್ಲರ ಬಾಜ್​ಬಾಜ್​ ಆಕ್ರಮಣ ಭಾರಿ ಸುದ್ದಿಮಾಡಿತ್ತು. ಮೊದಲ ಟೆಸ್ಟ್​ನಲ್ಲಿ ಭಾರತಕ್ಕೆ ಅದರ ಬಿಸಿಯೂ ತಟ್ಟಿತು. ಆದರೆ ನಂತರದಲ್ಲಿ ಬಾಜ್​ಬಾಲ್​ ಆಕ್ರಮಣಕ್ಕೆ ಸಂಪೂರ್ಣ ನಿಯಂತ್ರಣ ಹೇರುವಲ್ಲಿ ಭಾರತ ಯಶಸ್ವಿಯಾಗಿದೆ. ಅದರಲ್ಲೂ ಕೊನೇ 3 ಟೆಸ್ಟ್​ಗಳಲ್ಲಿ ಭಾರತ ಸುಲಭವಾಗಿಯೇ ಗೆಲುವು ಸಾಧಿಸಿತು. ಇದರಿಂದಾಗಿ ಈಗ ಬ್ರೆಂಡನ್​ ಮೆಕ್ಕಲಂ-ಬೆನ್​ ಸ್ಟೋಕ್ಸ್​ ಜೋಡಿಯ ಬಾಜ್​ಬಾಲ್​ ಕಾರ್ಯತಂತ್ರವೇ ಭಾರಿ ಟೀಕೆಯನ್ನು ಎದುರಿಸುವಂತಾಗಿದೆ.