ಚೆನ್ನೈ: ಆರ್. ಅಶ್ವಿನ್ (88ಕ್ಕೆ 6) ಮತ್ತು ರವೀಂದ್ರ ಜಡೇಜಾ (58ಕ್ಕೆ 3) ಜೋಡಿಯ ಅಮೋ ಸ್ಪಿನ್ ದಾಳಿಯ ಬಲದಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶವನ್ನು ಕಟ್ಟಿಹಾಕುವ ಮೂಲಕ 280 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಗೆಲುವಿನ ಸಂಭ್ರಮ ಕಂಡಿರುವ ಟೀಮ್ ಇಂಡಿಯಾ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ತನ್ನ 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೋಲಿಗಿಂತ ಅಧಿಕ ಗೆಲುವು ಕಂಡಂತಾಗಿದೆ. ಭಾರತ ಇದುವರೆಗೆ ಆಡಿರುವ 580 ಟೆಸ್ಟ್ಗಳಲ್ಲಿ ಇದು 179ನೇ ಜಯವಾಗಿದೆ. ಉಳಿದಂತೆ 178ರಲ್ಲಿ ಸೋತಿದ್ದು, 222 ಟೆಸ್ಟ್ ಡ್ರಾಗೊಂಡಿದೆ ಮತ್ತು 1 ಟೆಸ್ಟ್ ಟೈ ಆಗಿದೆ.
1952ರಲ್ಲಿ ಭಾರತ ಚೆನ್ನೆ$ನಲ್ಲೇ ತನ್ನ ಮೊದಲ ಟೆಸ್ಟ್ ಗೆಲುವನ್ನೂ ಸಾಧಿಸಿತ್ತು ಎಂಬುದು ವಿಶೇಷವಾಗಿದೆ. ಹಾಲಿ ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೆಲಿಯಾ (414-232), ಇಂಗ್ಲೆಂಡ್ (397-325), ಪಾಕಿಸ್ತಾನ (148-144) ಮತ್ತು ದ. ಆಫ್ರಿಕಾ (179-161) ಸೋಲಿಗಿಂತ ಅಧಿಕ ಟೆಸ್ಟ್ ಗೆಲುವು ಕಂಡಿರುವ ಇತರ ತಂಡಗಳಾಗಿವೆ.
ಡಬ್ಲ್ಯುಟಿಸಿಯಲ್ಲಿ ಅಗ್ರಸ್ಥಾನ ಭದ್ರ
ಭಾರತ ತಂಡ ಈ ಜಯದೊಂದಿಗೆ 3ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಒಟ್ಟು 86 ಮತ್ತು ಶೇ. 71.67 ಅಂಕ ಕಲೆಹಾಕಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾದೇಶ (ಶೇ. 39.29) ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4ರಿಂದ 6ನೇ ಸ್ಥಾನಕ್ಕೆ ಕುಸಿದಿದೆ. ಡಬ್ಲ್ಯುಟಿಸಿಯಲ್ಲಿ ಭಾರತಕ್ಕೆ ಇನ್ನೂ 9 ಟೆಸ್ಟ್ ಪಂದ್ಯಗಳು ಬಾಕಿ ಇದ್ದು, ಇದರಲ್ಲಿ ಇನ್ನೂ 5ರಲ್ಲಿ ಗೆದ್ದರೆ ಅಥವಾ 4ರಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದರೂ ಸತತ 3ನೇ ಬಾರಿ ಫೈನಲ್ಗೇರುವ ಅವಕಾಶವಿದೆ.
ವಾರ್ನ್ ಸರಿಗಟ್ಟಿದ ಅಶ್ವಿನ್
ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 37ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾಧನೆ ಸರಿಗಟ್ಟಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 67 ಬಾರಿ ಈ ಸಾಧನೆ ಮಾಡಿರುವುದು ಸರ್ವಾಧಿಕವಾಗಿದೆ.
*4: ಆರ್. ಅಶ್ವಿನ್ 4ನೇ ಬಾರಿಗೆ ಟೆಸ್ಟ್ ಪಂದ್ಯವೊಂದರಲ್ಲಿ ಶತಕ ಮತ್ತು 5 ವಿಕೆಟ್ ಗೊಂಚಲು ಗಳಿಸಿದರು. ಇಯಾನ್ ಬಾಥಮ್ 5 ಬಾರಿ ಈ ಸಾಧನೆ ಮಾಡಿರುವುದು ಸರ್ವಾಧಿಕವಾಗಿದೆ. ಅಶ್ವಿನ್ 38ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.
ಭಾರತ ತಂಡ ಬದಲಿಲ್ಲ
ಬಾಂಗ್ಲಾದೇಶ ವಿರುದ್ಧದ ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದರಿಂದಾಗಿ ವೇಗಿ ಜಸ್ಪ್ರೀತ್ ಬುಮ್ರಾ ಸರಣಿಯ 2ನೇ ಪಂದ್ಯದಲ್ಲೂ ಆಡುವುದು ಸ್ಪಷ್ಟವಾಗಿದೆ. ಈ ಮುನ್ನ, ಕಾರ್ಯದೊತ್ತಡ ತಗ್ಗಿಸಲು ಬುಮ್ರಾಗೆ 2ನೇ ಪಂದ್ಯದಿಂದ ವಿಶ್ರಾಂತಿ ನೀಡುವ ನಿರೀಕ್ಷೆ ಇಡಲಾಗಿತ್ತು.