ಪಾಟ್ಚೇಫ್ಸ್ಟ್ರೋಮ್ದಕ್ಷಿಣಆಫ್ರಿಕಾ): ಸರ್ವಾಂಗೀಣ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಬಾರಿಗೆ ಸೆಮಿಫೈನಲ್ಗೇರಿತು. ಸೆನ್ವೆಸ್ ಪಾರ್ಕ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪ್ರಿಯಂ ಗಾರ್ಗ್ ಪಡೆ 74 ರನ್ಗಳಿಂದ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಕಿರಿಯರ ವಿಶ್ವಕಪ್ನಲ್ಲಿ ಭಾರತಕ್ಕೆ ಸತತ 10ನೇ ಗೆಲುವು ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ 4 ಬಾರಿಯ ಚಾಂಪಿಯನ್ ಭಾರತ ತಂಡ, ಯಶಸ್ವಿ ಜೈಸ್ವಾಲ್ (62 ರನ್, 82 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಅಥರ್ವ ಅಂಕೋಲ್ಕರ್ (55*ರನ್, 54 ಎಸೆತ, 5 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 9 ವಿಕೆಟ್ಗೆ 233 ರನ್ಗಳಿಸಿತು. ಬಳಿಕ ಕಾರ್ತಿಕ್ ತ್ಯಾಗಿ (24ಕ್ಕೆ 4) ಹಾಗೂ ಆಕಾಶ್ ಸಿಂಗ್ (30ಕ್ಕೆ 3) ದಾಳಿಗೆ ಬೆದರಿದ ಆಸ್ಟ್ರೇಲಿಯಾ 43.3 ಓವರ್ಗಳಲ್ಲಿ 159 ರನ್ಗಳಿಗೆ ಸರ್ವಪತನ ಕಂಡಿತು. ಕಿರಿಯರ ವಿಶ್ವಕಪ್ನಲ್ಲಿ ಭಾರತಕ್ಕೆ 2103ರಿಂದ ಆಸ್ಟ್ರೇಲಿಯಾ ಎದುರು ಸತತ 5ನೇ ಗೆಲುವು ಇದಾಗಿದೆ.
ಭಾರತ ತಂಡ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ- ದಕ್ಷಿಣ ಆಫ್ರಿಕಾ ನಡುವಿನ ಕ್ವಾರ್ಟರ್ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಭಾರತ: 9 ವಿಕೆಟ್ಗೆ 233 (ಯಶಸ್ವಿ ಜೈಸ್ವಾಲ್ 62, ಅಥರ್ವ ಅಂಕೋಲ್ಕರ್ 55*, ಸಿದ್ದೇಶ್ ವೀರ್ 25, ರವಿ ಬಿಷ್ಣೋಯಿ 30, ಕೆಲ್ಲಿ 45ಕ್ಕೆ 2, ಟೊಡ್ ಮರ್ಫಿ 40ಕ್ಕೆ 2), ಆಸ್ಟ್ರೇಲಿಯಾ: 43.3 ಓವರ್ಗಳಲ್ಲಿ 159 (ಸ್ಯಾಮ್ ಫ್ಯಾನ್ನಿಂಗ್ 75, ಸ್ಕಾಟ್ 35, ಕಾರ್ತಿಕ್ 24ಕ್ಕೆ 4, ಆಕಾಶ್ 30ಕ್ಕೆ 3, ಬಿಷ್ಣೋಯಿ 26ಕ್ಕೆ 1).
ಸಾಧಾರಣ ಮೊತ್ತ ಬೆನ್ನಟ್ಟಿದ ಆಸೀಸ್ಗೆ ಮೊದಲ ಓವರ್ನಲ್ಲೇ ಕಾರ್ತಿಕ್ ತ್ಯಾಗಿ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್ಮನ್ ಫ್ರೆಸರ್ ಮೆಕ್ಗುರ್ಕ್ ಎಸೆತ ಎದುರಿಸುವ ಮೊದಲೇ ರನೌಟ್ ಬಲೆಗೆ ಬಿದ್ದರೆ, ನಾಯಕ ಮ್ಯಾಕೆನ್ಜೀ ಹಾರ್ವೆ (4) ಹಾಗೂ ಲಚ್ಲಾನ್ ಹಿಯಾರ್ನೆ (0) ಮೊದಲ ಓವರ್ನ 4ನೇ ಹಾಗೂ 5ನೇ ಎಸೆತದಲ್ಲಿ ಔಟಾದರು. 4 ರನ್ಗೆ 3 ವಿಕೆಟ್ ಕಳೆದುಕೊಂಡ ಆಸೀಸ್ ಸೋಲಿನ ಸುಳಿಯಲ್ಲಿ ಸಿಲುಕಿತು. ಆರಂಭಿಕ ಸ್ಯಾಮ್ ಫ್ಯಾನ್ನಿಂಗ್ (75) ಏಕಾಂಗಿ ನಿರ್ವಹಣೆ ಮೂಲಕ ಭಾರತೀಯ ಬೌಲರ್ಗಳನ್ನು ಕೆಲಕಾಲ ಕಾಡಿದರು. ಪ್ಯಾಟ್ರಿಕ್ ರೊವೆ (21) ಜತೆಗೂಡಿ 5ನೇ ವಿಕೆಟ್ಗೆ 51 ರನ್, ಲಿಯಾನ್ ಸ್ಕಾಟ್ (35) ಜತೆಗೂಡಿ 6ನೇ ವಿಕೆಟ್ಗೆ 81 ರನ್ ಸೇರಿಸಿ ತಿರುಗೇಟು ನೀಡಲು ಯತ್ನಿಸಿದರು. ಸ್ಪಿನ್ನರ್ ರವಿ ಬಿಷ್ಣೋಯಿ, ಸ್ಕಾಟ್ ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಆಸೀಸ್ 4 ರನ್ ಅಂತರದಲ್ಲಿ ಕಡೇ 4 ವಿಕೆಟ್ ಕಳೆದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ಗಿಳಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಆರಂಭಿಕ ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾದರು. ಬಳಿಕ ಒಂದು ಹಂತದಲ್ಲಿ 114 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯ ಲ್ಲಿದ್ದ ಭಾರತಕ್ಕೆ ಆಲ್ರೌಂಡರ್ ಅಥರ್ವ ಅಂಕೋಲ್ಕರ್ ಬಿರುಸಿನ ಬ್ಯಾಟಿಂಗ್ ಮೂಲಕ ಆಸರೆಯಾಗಿ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರವಿ ಬಿಷ್ಣೋಯಿ (30 ರನ್, 31 ಎಸೆತ, 1 ಬೌಂಡರಿ, 1 ಸಿಕ್ಸರ್) ಜತೆಗೂಡಿ ಅಥರ್ವ 7ನೇ ವಿಕೆಟ್ಗೆ 59 ಎಸೆತಗಳಲ್ಲಿ 61 ರನ್ ಸೇರಿಸಿದರು. ಇನಿಂಗ್ಸ್ನ ಅಂತಿಮ ಹಂತದವರೆಗೂ ಹೋರಾಡಿದ ಅಥರ್ವ ಮೊತ್ತವನ್ನು 230ರ ಗಡಿ ದಾಟಿಸಿದರು.
200: ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ನಲ್ಲಿ 200 ಗೆಲುವು ದಾಖಲಿಸಿದ ಮೊದಲ ತಂಡ ಎನಿಸಿಕೊಂಡಿತು. 261 ಪಂದ್ಯಗಳಲ್ಲಿ 56 ಸೋಲು, 2 ಟೈ, 3 ರದ್ದು ಕಂಡಿದೆ.
10: ಸತತ 10ನೇ ಗೆಲುವು ಕಂಡ ಭಾರತ, 2002-04ರಲ್ಲಿ ಸತತ 9 ಜಯ ಕಂಡಿದ್ದ ಆಸೀಸ್ ದಾಖಲೆ ಮುರಿಯಿತು.