ಕ್ರೀಡೆ

ಬ್ರಿಕ್ಸ್​ ಕೂಟ ಆಯೋಜನೆಗೆ ಕ್ರೀಡಾ ಸಚಿವಾಲಯ ಚಿಂತನೆ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ವೇಳೆ ಬ್ರಿಕ್ಸ್​ ಗೇಮ್ಸ್​ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ತಿಳಿಸಿದ್ದಾರೆ. ಬ್ರಿಕ್ಸ್​ (ಬ್ರೆಜಿಲ್​, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಕ್ರೀಡಾ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಕಿರಣ್​ ರಿಜಿಜು ಹೇಳಿದ್ದಾರೆ. ಐದು ರಾಷ್ಟ್ರಗಳ ಕ್ರೀಡಾಕೂಟಕ್ಕೆ ಭಾರತ ಅಧ್ಯಕ್ಷತೆ ವಹಿಸಲಿದೆ ಎಂದರು.

2021ರ ಖೇಲೋ ಇಂಡಿಯಾ ವೇಳೆ ಅದೇ ಸ್ಥಳಗಳಲ್ಲಿ ಬ್ರಿಕ್ಸ್​ ಗೇಮ್ಸ್​ -2021 ನಡೆಯಲಿದ್ದು, ದೇಶದಾದ್ಯಂತ ಆಗಮಿಸುವ ಯುವ ಕ್ರೀಡಾಪಟುಗಳಿಗೆ ಬ್ರಿಕ್ಸ್​ ಗೇಮ್ಸ್​ ವೀಕ್ಷಿಸುವ ಅವಕಾಶ ಲಭಿಸಲಿದೆ ಎಂದು ಸಚಿವರು ವಿವರಿಸಿದರು. ನಿರೀಕ್ಷೆಯಂತೆ ಖೇಲೋ ಇಂಡಿಯಾ ಯೂತ್​ ಗೇಮ್ಸ್​ ಹಾಗೂ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಗಳು 2021ರಲ್ಲಿ ನಡೆಯಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ಕ್ರೀಡಾಕೂಟಗಳು ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಬ್ರಿಕ್ಸ್​ ರಾಷ್ಟ್ರಗಳ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ.

ಬ್ರಿಕ್ಸ್​ ರಾಷ್ಟ್ರಗಳ ಪೈಕಿ ಚೀನಾ ಪಾಲ್ಗೊಳ್ಳುವಿಕೆ ಮಹತ್ವ ಪಡೆದಿದೆ. ಚೀನಾದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿರುವ ಹಿನ್ನೆಲೆಯಲ್ಲಿ ಚೀನಾ ತಂಡ ಪಾಲ್ಗೊಳ್ಳುವಿಕೆಯೂ ಅನುಮಾನ ಮೂಡಿಸಿದೆ.