ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ಆಗಮಿಸುವ ಚೀನಾ ಷಟ್ಲರ್ಗಳ ಆರೋಗ್ಯದ ಕುರಿತು ಸ್ಪಷ್ಟ ಮಾಹಿತಿ ಕಲೆಹಾಕಬೇಕೆಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ (ಬಿಎಐ) ಕೇಂದ್ರ ಸರ್ಕಾರ ಪ್ರಶ್ನಾವಳಿ ಕಳುಹಿಸಿಕೊಟ್ಟಿದೆ. ಈ ನಡುವೆ ಕರೊನಾ ವೈರಸ್ ಕಾರಣದಿಂದಾಗಿ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ನಡೆಯುವುದು ಅನುಮಾನ ಎನ್ನುವ ಮಾತುಗಳೂ ಕೇಳಿ ಬಂದಿವೆ. ಈ ಕುರಿತು ಬಿಎಐಗೆ ಪತ್ರ ಬರೆದಿರುವ ವಿದೇಶಾಂಗ ಇಲಾಖೆ, ಭಾರತಕ್ಕೆ ಆಗಮಿಸುವುದಕ್ಕೂ ಮೊದಲು ಚೀನಾ ಷಟ್ಲರ್ಗಳಿಂದ ಆರೋಗ್ಯದ ಮಾಹಿತಿ ಕಲೆಹಾಕಲು ಸೂಚಿಸಿದೆ.
ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಲು ಈ ಟೂರ್ನಿ ಷಟ್ಲರ್ಗಳಿಗೆ ಭಾರಿ ಮಹತ್ವ ಪಡೆದಿದೆ. ಆಟಗಾರರು/ಅಧಿಕಾರಿಗಳು ಚೀನಾದ ಯಾವ ರಾಜ್ಯದಿಂದ ಬಂದವರಾಗಿದ್ದಾರೆ. ಸ್ಥಳೀಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿದ್ದಾರಾ, ಎಷ್ಟು ಮಂದಿ ಆಟಗಾರರು ಟೂರ್ನಿಗೆ ಬರುತ್ತಿದ್ದಾರೆ ಎಂದು ಕೆಲ ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದೆ.
ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿ ರದ್ದು
ನವದೆಹಲಿ: ಕರೊನಾ ವೈರಸ್ ಕಾರಣದಿಂದಾಗಿ ಮಾರ್ಚ್ 27 ರಿಂದ 29ರವರೆಗೆ ಬಿಶ್ಕೆಕ್ನಲ್ಲಿ ನಡೆಯಬೇಕಿದ್ದ ಏಷ್ಯನ್ ಒಲಿಂಪಿಕ್ ಕುಸ್ತಿ ಅರ್ಹತಾ ಟೂರ್ನಿಗೆ ಆತಿಥ್ಯ ವಹಿಸಿಕೊಳ್ಳುತ್ತಿಲ್ಲ ಎಂದು ರ್ಕಿಗಿಸ್ತಾನ ಸರ್ಕಾರ ಹೇಳಿದೆ. ಈ ಟೂರ್ನಿಯನ್ನು ಆಯೋಜಿಸಲು ಭಾರತ ಮೊದಲಿಗೆ ಆಸಕ್ತಿ ತೋರಿತ್ತಾದರೂ, ಕರೊನಾವೈರಸ್ ಕಾರಣದಿಂದಾಗಿ ಟೂರ್ನಿಗೆ ತಾವು ಆತಿಥ್ಯ ವಹಿಸುತ್ತಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಜತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ವಿಶ್ವ ಕುಸ್ತಿ ಸಂಸ್ಥೆ ಹೇಳಿದೆ. ‘ಕರೊನಾವೈರಸ್ ಚೀನಾದೊಂದಿಗೆ ವಿಶ್ವದ ಇತರ ಕಡೆಯೂ ಹಬ್ಬುತ್ತಿದೆ. ರ್ಕಿಗಿಸ್ತಾನದಲ್ಲಿ ಇದು ಹಬ್ಬುವುದು ಬೇಡ ಎನ್ನುವ ಕಾರಣಕ್ಕಾಗಿ ಟೂರ್ನಿಯನ್ನು ರದ್ದು ಮಾಡುತ್ತಿದ್ದೇವೆ’ ಎಂದು ರ್ಕಿಗಿಸ್ತಾನ ಸರ್ಕಾರದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆಎಂ ಅಪಾರ್ಚಿವ್ ಹೇಳಿದ್ದಾರೆ.