ಐಚಿ-ನಗೋಯಾ: ಏಷ್ಯಾಡ್ ಕಬಡ್ಡಿ ಸ್ಪರ್ಧೆಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಶನಿವಾರ ಅವಳಿ ಸ್ವರ್ಣ ಪದಕದ ಸಂಭ್ರಮ ತಂದಿವೆ. ಭಾರತದ ಪುರುಷರ ತಂಡ 9ನೇ ಮತ್ತು ಮಹಿಳಾ ತಂಡ 4ನೇ ಬಾರಿ ಏಷ್ಯಾಡ್ನಲ್ಲಿ ಚಿನ್ನದ ಪದಕ ಜಯಿಸಿದೆ. ಭಾರತದ ಎರಡೂ ತಂಡಗಳು ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇರಾನ್ ತಂಡದ ನಿಕಟ ಪೈಪೋಟಿಯನ್ನು ಹಿಮ್ಮೆಟ್ಟಿಸಿ ಚಿನ್ನದ ಪದಕ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದವು.
ಹರಿಯಾಣದ ಸುನೀಲ್ ಕುಮಾರ್ ಸಾರಥ್ಯದ ಭಾರತದ ಪುರುಷರ ತಂಡ ಸ್ವರ್ಣ ಪದಕದ ಹೋರಾಟದಲ್ಲಿ ಇರಾನ್ ವಿರುದ್ಧ 40-34 ಅಂಕಗಳಿಂದ ಗೆಲುವು ಸಾಧಿಸಿತು. ಮೊದಲಾರ್ಧದಲ್ಲಿ ಭಾರತ ತಂಡ 17-18ರಿಂದ ಅಲ್ಪ ಹಿನ್ನಡೆ ಅನುಭವಿಸಿತ್ತು. ಬಳಿಕ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿದ ಭಾರತದ ಗೆಲುವಿಗೆ ರೈಡರ್ಗಳಾದ ಅರ್ಜುನ್ ದೇಸ್ವಾಲ್ ಮತ್ತು ದೇವಾಂಕ್ ನೆರವಾದರು. ಅನುಭವಿ ಆಟಗಾರ ಪವನ್ ಸೆಹ್ರಾವತ್ ಕಣಕ್ಕಿಳಿಯದೆಯೇ ಭಾರತ ಈ ಗೆಲುವು ಒಲಿಸಿಕೊಂಡಿತು. ದ್ವೀತಿಯಾರ್ಧದಲ್ಲಿ ಕಾರ್ಯತಂತ್ರ ಬದಲಾಯಿಸಿದ ಭಾರತ ಪ್ರಮುಖ ರೈಡರ್ಗಳನ್ನಷ್ಟೇ ಕಣಕ್ಕಿಳಿಸಿ ಯಶಸ್ಸು ಸಾಧಿಸಿತು. ಇರಾನ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ 29-24ರಿಂದ ಮುನ್ನಡೆ ಸಾಧಿಸಿದ ಬಳಿಕ ಭಾರತ ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಇದಕ್ಕೆ ಮುನ್ನ ಹಿಮಾಚಲ ಪ್ರದೇಶದ ಪುಷ್ಪಾ ರಾಣಾ ಸಾರಥ್ಯದ ಭಾರತದ ಮಹಿಳಾ ತಂಡ ಇರಾನ್ ವಿರುದ್ಧದ ಫೈನಲ್ನಲ್ಲಿ 37-34ರಿಂದ ರೋಚಕ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಇರಾನ್ ವಿರುದ್ಧ ಗೆದ್ದಿದ್ದ ವಿಶ್ವಾಸದಲ್ಲಿ ಕಣಕ್ಕಿಳಿದ ಭಾರತ ಪರ ನಿಕಿತಾ, ಪೂಜಾ ಮತ್ತು ಸಂಜು ದೇವಿ ಭರ್ಜರಿ ರೈಡಿಂಗ್ನಿಂದ ಗಮನಸೆಳೆದರು. ಮೊದಲಾರ್ಧದಲ್ಲೇ ಇರಾನ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿದ ಭಾರತ 22-16ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ನಿಕಟ ಪ್ರತಿರೋಧ ತೋರಿಸಿತು. ಇದರಿಂದ ಭಾರತದ ರಕ್ಷಣಾ ವಿಭಾಗಕ್ಕೆ ಪ್ರಬಲ ಸತ್ವಪರೀಕ್ಷೆ ಎದುರಾಯಿತು. ಈ ನಡುವೆ ಭಾರತ ಆಲೌಟ್ ಆಗಿದ್ದರಿಂದ ಮುನ್ನಡೆ 28-27ಕ್ಕೆ ಕುಸಿಯಿತು. ಇದರಿಂದ ಕೊನೇ ಹಂತದಲ್ಲಿ ರೋಚಕತೆ ಹೆಚ್ಚಿತು. 2023ರ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ತಂಡದಲ್ಲೂ ಇದ್ದ ಭಾರತದ ಹೆಚ್ಚಿನ ಆಟಗಾರ್ತಿಯರು ಈ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು. ಅಲ್ಲದೆ ರಕ್ಷಣಾತ್ಮಕ ತಂತ್ರಕ್ಕೆ ಬದಲಾಗಿ ಹೆಚ್ಚಿನ ಆಕ್ರಮಣ ನಡೆಸಿ ಯಶಸ್ಸು ಸಾಧಿಸಿದರು. ಇದರಿಂದ ಭಾರತ ಕೊನೇ ನಿಮಿಷ ಬಾಕಿ ಇದ್ದಾಗ 37-31ರಿಂದ ಮುನ್ನಡೆಯೊಂದಿಗೆ ಗೆಲುವು ಬಹುತೇಕ ಖಚಿತಪಡಿಸಿಕೊಂಡಿತು. ಇರಾನ್ ಅಂತಿಮ ರೈಡ್ನಲ್ಲಿ ಸೋಲಿನ ಅಂತರ ತಗ್ಗಿಸಿಕೊಳ್ಳಲಷ್ಟೇ ಶಕ್ತವಾಯಿತು. ಭಾರತದ ಆಟಗಾರ್ತಿಯರು "ವಂದೇ ಮಾತರಂ' ಉದ್ಘೋಷದೊಂದಿಗೆ ಸಂಭ್ರಮಿಸಿದರು.