ಕ್ರೀಡೆ

ಭಾರತ ಫುಟ್​ಬಾಲ್​ ತಂಡದ​ ಸತತ 11 ಪಂದ್ಯಗಳ ಅಜೇಯ ಓಟ ಅಂತ್ಯ

ಚಿಯಾಂಗ್​ ಮೈ (ಥಾಯ್ಲೆಂಡ್​): ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಭಾರತ ಫುಟ್​ಬಾಲ್​ ತಂಡ ಕಿಂಗ್ಸ್​ ಕಪ್​ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಇರಾಕ್​ ಎದುರು ಪೆನಾಲ್ಟಿ ಶೂಟೌಟ್​ನಲ್ಲಿ 4-5 ಗೋಲುಗಳಿಂದ ವೀರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಭಾರತದ 11 ಪಂದ್ಯಗಳ ಅಜೇಯ ಓಟ ಕೊನೆಗೊಂಡಿದೆ.

ಸ್ಟಾರ್​ ಆಟಗಾರ ಸುನೀಲ್​ ಛೇಟ್ರಿ ಗೈರಿನಲ್ಲಿ ಕಣಕ್ಕಿಳಿದ ಭಾರತ (99) ತಂಡ ಫಿಫಾ ರ್ಯಾಂಕಿಂಗ್​ನಲ್ಲಿ ತನಗಿಂತ ಮೇಲಿರುವ ಇರಾನ್​ (70) ಎದುರು ದಿಟ್ಟ ಪ್ರತಿರೋಧ ತೋರಿತು.

ಗುರುವಾರ ನಡೆದ ಪಂದ್ಯದ ನಿಗದಿತ ಸಮಯದಲ್ಲಿ ಭಾರತ 2&2 ಗೋಲುಗಳ ಸಮಬಲ ಸಾಧಿಸಿತ್ತು. ಭಾರತದ ಪರ ಮಹೇಶ್​ ನವೊರೆಮ್​ (16ನೇ ನಿಮಿಷ) ಏಕೈಕ ಗೋಲುಗಳಿಸಿದರೆ, ಇರಾಕ್​ ನಾಯಕ ಹಾಗೂ ಗೋಲು ಕೀಪರ್​ ಜಲಾಲ್​ ಹಸನ್​ ಸ್ವಯಂಕೃತ ತಪ್ಪಿನಿಂದ ಭಾರತಕ್ಕೆ ಗೋಲಿನ ಉಡುಗೊರೆ ನೀಡಿದರು. ಇರಾಕ್​ ಪರ ಕರೀಮ್​ ಅಲಿ (28) ಹಾಗೂ ಅಯೆನ್​ ದಬನ್​ (79) ಗೋಲು ಸಿಡಿಸಿದರು.