ಕ್ರೀಡೆ

ಬೆಂಗಳೂರಿನಲ್ಲಿ ಇಂದು ಆಫ್ಘನ್​ ಎದುರು ಕೊನೇ ಟಿ20; ಕ್ಲೀನ್​ಸ್ವೀಪ್​ ತವಕದಲ್ಲಿ ಟೀಮ್​ ಇಂಡಿಯಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮೊಹಾಲಿ, ಇಂದೋರ್​ನಲ್ಲಿ ಗೆದ್ದು ಬೀಗಿರುವ ಭಾರತ ತಂಡ ಇದೀಗ ಉದ್ಯಾನನಗರಿಯಲ್ಲೂ ಗೆಲುವಿನ ಓಟ ಮುಂದುವರಿಸುವ ಮೂಲಕ ಸರಣಿ ಕ್ಲೀನ್​ಸ್ವೀಪ್​ ಸಂಭ್ರಮ ಕಾಣುವ ತವಕದಲ್ಲಿದೆ. ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಬುಧವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರೋಹಿತ್​ ಶರ್ಮ ಪಡೆ ಮತ್ತೊಂದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಆಲ್ರೌಂಡರ್​ ಶಿವಂ ದುಬೆ ಮೊದಲೆರಡೂ ಪಂದ್ಯಗಳಲ್ಲಿ ಮಿಂಚಿದ್ದು, ಭಾರತ ಇಂದೋರ್​ನಲ್ಲೇ ಸರಣಿ ವಶಪಡಿಸಿಕೊಳ್ಳಲು ನೆರವಾಗಿದ್ದಾರೆ. ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಇನ್ನೂ 5 ತಿಂಗಳು ಬಾಕಿ ಇದ್ದರೂ, ಅದಕ್ಕೆ ಮುನ್ನ ಭಾರತ ತಂಡ ಆಡಲಿರುವ ಕೊನೇ ಚುಟುಕು ಕ್ರಿಕೆಟ್​ ಪಂದ್ಯ ಇದಾಗಿದೆ. ಹೀಗಾಗಿ ತಂಡ ಸಂಯೋಜನೆ ಪರೀಸಲು ಇದು ಕೊನೇ ಅವಕಾಶವಾಗಿದೆ.

14 ತಿಂಗಳ ಬಳಿಕ ಭಾರತ ಪರ ಟಿ20 ಪಂದ್ಯ ಆಡಿರುವ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರಿಂದ ದೊಡ್ಡ ಮೊತ್ತದ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಇದಕ್ಕಾಗಿ ಭಾರತ ತಂಡ ಚಿನ್ನಸ್ವಾಮಿಯಲ್ಲಿ ಮೊದಲ ಸರದಿಯಲ್ಲಿ ಬ್ಯಾಟಿಂಗ್​ಗೆ ಇಳಿಯುವುದು ಕೂಡ ಅಗತ್ಯವಾಗಿದೆ.

ಹಾರ್ದಿಕ್​ ಪಾಂಡ್ಯ ಗೈರಿನಲ್ಲಿ ಸಿಕ್ಕ ಅವಕಾಶವನ್ನು ಶಿವಂ ದುಬೆ ಉತ್ತಮವಾಗಿಯೇ ಬಳಸಿಕೊಂಡಿದ್ದಾರೆ. ಹಾರ್ದಿಕ್​ ಸ್ಥಾನ ತುಂಬಲು ಸದ್ಯ ಇವರೇ ಉತ್ತಮ ಆಯ್ಕೆ ಎನಿಸಿದ್ದಾರೆ. ಹೀಗಾಗಿ ಆಗಾಗ ಗಾಯಕ್ಕೆ ತುತ್ತಾಗುವ ಹಾರ್ದಿಕ್​ಗೆ ಬದಲಿಯಾಗಿ ದುಬೆ ಮುಂದೆಯೂ ಮೀಸಲು ಪಡೆಯಲ್ಲಿ ಉಳಿಯಲಿದ್ದು, ಬೌಲಿಂಗ್​ನಲ್ಲೂ ಮಿಂಚುವ ಅಗತ್ಯವಿದೆ.

*7: ಭಾರತ ತಂಡ ಬೆಂಗಳೂರಿನಲ್ಲಿ ಇದುವರೆಗೆ 7 ಟಿ20 ಪಂದ್ಯ ಆಡಿದ್ದು, ತಲಾ 3 ಗೆಲುವು-ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದುಗೊಂಡಿದೆ.

ಟೀಮ್​ ನ್ಯೂಸ್​:

ಭಾರತ: ಈಗಾಗಲೆ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ ಕೊನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​, ಕುಲದೀಪ್​ ಯಾದವ್​ ಮತ್ತು ಆವೇಶ್​ ಖಾನ್​ಗೆ ಸ್ಥಾನ ಕಲ್ಪಿಸುವ ನಿರೀಕ್ಷೆ ಇದೆ.

ಅಫ್ಘಾನಿಸ್ತಾನ: ರಶೀದ್​ ಖಾನ್​ ಗೈರಿನಲ್ಲಿ ಬಲ ಕಳೆದುಕೊಂಡಂತಿರುವ ಆ್ಘನ್​ ಬೌಲಿಂಗ್​ ವಿಭಾಗಕ್ಕೆ ಈ ಬಾರಿ ಯುವ ಲೆಗ್​ ಸ್ಪಿನ್ನರ್​ ಕೈಸ್​ ಅಹ್ಮದ್​ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

ಒತ್ತಡದಲ್ಲಿ ರೋಹಿತ್​

ಯುವ ಆಟಗಾರರ ತಂಡದೊಂದಿಗೆ ಆರಂಭಿಕ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ನಡುವೆ ನಾಯಕ ರೋಹಿತ್​ ಶರ್ಮ ವೈಯಕ್ತಿಕವಾಗಿ ಸರಣಿಯಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ಅವರು, ಟಿ20 ವಿಶ್ವಕಪ್​ಗೆ ಮುನ್ನ ಭಾರತ ಆಡಲಿರುವ ಕೊನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್​ ಲಯ ಪ್ರದರ್ಶಿಸಬೇಕಾಗಿದೆ. ಹಾಗೆಂದು ಈ ಪಂದ್ಯದ ವೈಫಲ್ಯ ಅವರಿಗೆ ಟಿ20 ವಿಶ್ವಕಪ್​ ಬಾಗಿಲು ಮುಚ್ಚುವ ಸಾಧ್ಯತೆ ಇಲ್ಲ. ಐಪಿಎಲ್​ನಲ್ಲೂ ಅವರು ಟಿ20 ಆರ್ಭಟ ಪ್ರದರ್ಶಿಸಿ ಆಯ್ಕೆಗಾರರ ಮನಗೆಲ್ಲಬಹುದಾಗಿದೆ.

ಧೋನಿ ದಾಖಲೆ ಮುರಿಯುವತ್ತ ರೋಹಿತ್​

ಬೆಂಗಳೂರಿನಲ್ಲಿ ಗೆದ್ದರೆ ರೋಹಿತ್​ ಶರ್ಮ ಟಿ20 ತಂಡದ ನಾಯಕರಾಗಿ ಗರಿಷ್ಠ ಗೆಲುವು ಕಂಡ ಭಾರತೀಯರೆನಿಸಲಿದ್ದಾರೆ. ರೋಹಿತ್​ (53 ಪಂದ್ಯ) ಸದ್ಯ ಧೋನಿ (72 ಪಂದ್ಯ) ಜತೆಗೆ ತಲಾ 41 ಗೆಲುವಿನ ಸಮಬಲ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ 42 ಗೆಲುವು ಕಂಡಿರುವ ನಾಯಕರಾದ ಇಂಗ್ಲೆಂಡ್​ನ ಇವೊಯಿನ್​ ಮಾರ್ಗನ್​, ಪಾಕಿಸ್ತಾನದ ಬಾಬರ್​ ಅಜಮ್​, ಉಗಾಂಡದ ಬ್ರಿಯಾನ್​ ಮಸಾಬಾ ಮತ್ತು ಅಫ್ಘಾನಿಸ್ತಾನದ ಅಸ್ಘರ್​ ಆಫ್ಘನ್​ ಜಂಟಿ ದಾಖಲೆಯನ್ನೂ ರೋಹಿತ್​ ಸರಿಗಟ್ಟಲಿದ್ದಾರೆ.

ಪಿಚ್​ ರಿಪೋರ್ಟ್​

ಬ್ಯಾಟರ್​ಗಳ ಪಾಲಿನ ಸ್ವರ್ಗವೆನಿಸಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಸಲವೂ ರನ್​ಮಳೆಯ ನಿರೀಕ್ಷೆ ಇದೆ. ಕಳೆದ ತಿಂಗಳು ಇಲ್ಲಿ ನಡೆದ ಆಸೀಸ್​ ವಿರುದ್ಧದ ಟಿ20ಯಲ್ಲಿ ಭಾರತ ತಂಡ 160 ರನ್​ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

12 ಸಾವಿರ ರನ್​ ಸನಿಹ ಕೊಹ್ಲಿ

ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಪಂದ್ಯದಲ್ಲಿ 6 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ ಪೂರೈಸಿದ ಮೊದಲ ಭಾರತೀಯ ಎನಿಸಲಿದ್ದಾರೆ. ಕೊಹ್ಲಿ ಸದ್ಯ 375 ಪಂದ್ಯಗಳಲ್ಲಿ 11,994 ರನ್​ ಬಾರಿಸಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗಳಿಸಿರುವ 4,037 ರನ್​ ಮತ್ತು ಐಪಿಎಲ್​ನಲ್ಲಿ ಸಿಡಿಸಿರುವ 7,263 ರನ್​ಗಳೂ ಸೇರಿವೆ. ಕೊಹ್ಲಿ 12 ಸಾವಿರಕ್ಕೂ ಅಧಿಕ ರನ್​ ಗಳಿಸಿದ ವಿಶ್ವದ 4ನೇ ಬ್ಯಾಟರ್​ ಎನಿಸಲಿದ್ದಾರೆ. ಕ್ರಿಸ್​ ಗೇಲ್​ (14,562), ಶೋಯಿಬ್​ ಮಲಿಕ್​ (12,993) ಮತ್ತು ಕೈರಾನ್​ ಪೊಲ್ಲಾರ್ಡ್​ (12,430) ಮೊದಲ ಮೂವರು ಸಾಧಕರಾಗಿದ್ದಾರೆ.