ಕ್ರೀಡೆ

ಭಾರತ ಲೆಜೆಂಡ್ಸ್ ತಂಡಕ್ಕೆ ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಪ್ರಶಸ್ತಿ

ರಾಯ್‌ಪುರ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ಲೆಜೆಂಡ್ಸ್ ತಂಡ ‘ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20’ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು. ಸಚಿನ್ ತೆಂಡುಲ್ಕರ್ ಸಾರಥ್ಯದ ಭಾರತ ತಂಡ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 14 ರನ್‌ಗಳಿಂದ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಸೋಲಿಸಿತು. ಕಳೆದ ವರ್ಷ ಕರೊನಾ ಹಾಳಿಯಿಂದಾಗಿ ಟೂರ್ನಿ ಸ್ಥಗಿತಗೊಂಡಿತ್ತು. ಈ ವರ್ಷ ಮುಂದುವರಿದ ಭಾಗವಾಗಿ ನಡೆದ ಟೂರ್ನಿಯಲ್ಲಿ ವಿಶ್ವದ ದಿಗ್ಗಜ ಹಾಗೂ ಮಾಜಿ ಆಟಗಾರರ ಭರ್ಜರಿ ನಿರ್ವಹಣೆ ತೋರುವ ಮೂಲಕ ಗಮನಸೆಳೆದರು.

ಶಹೀದ್ ವೀರನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲೆಜೆಂಡ್ಸ್ ತಂಡ, ಆಲ್ರೌಂಡರ್‌ಗಳಾದ ಯೂಸುಫ್ ಪಠಾಣ್ (62*ರನ್, 36 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ಯುವರಾಜ್ ಸಿಂಗ್ (60ರನ್, 41 ಎಸೆತ, 4 ಬೌಂಡರಿ, 4 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 181 ರನ್ ಕಲೆಹಾಕಿತು. ಬಳಿಕ ಶ್ರೀಲಂಕಾ ಲೆಜೆಂಡ್ಸ್ ತಂಡ, ಯೂಸುಫ್ ಪಠಾಣ್ (26ಕ್ಕೆ 2) ಹಾಗೂ ಇರ್ಫಾನ್ ಪಠಾಣ್ (29ಕ್ಕೆ 2) ಮಾರಕ ದಾಳಿಗೆ ನಲುಗಿ 7 ವಿಕೆಟ್‌ಗೆ 167 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಭಾರತ ಲೆಜೆಂಡ್ಸ್ ತಂಡ: 4 ವಿಕೆಟ್‌ಗೆ 181 (ವೀರೇಂದ್ರ ಸೆಹ್ವಾಗ್ 10, ಸಚಿನ್ ತೆಂಡುಲ್ಕರ್ 30, ಯುವರಾಜ್ ಸಿಂಗ್ 60, ಯೂಸುಫ್ ಪಠಾಣ್ 62*, ರಂಗನಾ ಹೆರಾತ್ 11ಕ್ಕೆ 1, ಸನತ್ ಜಯಸೂರ್ಯ 17ಕ್ಕೆ 1, ಫರ್ವೇಜ್ 16ಕ್ಕೆ 1). ಶ್ರೀಲಂಕಾ: 7 ವಿಕೆಟ್‌ಗೆ 167 (ತಿಲಕರತ್ನೆ ದಿಲ್ಶಾನ್ 21, ಸನತ್ ಜಯಸೂರ್ಯ 43, ಚಿನಾತಕ ಜಯಸಿಂಘೆ 28*, ವೀರರತ್ನೆ 30*, ಯೂಸುಫ್ ಪಠಾಣ್ 26ಕ್ಕೆ 2, ಇರ್ಫಾನ್ ಪಠಾಣ್ 29ಕ್ಕೆ 2).