ಕ್ರೀಡೆ

2030ರ ಯೂತ್​ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತ ಸಿದ್ಧತೆ; ಕ್ರಿಕೆಟ್​ ಸ್ಪರ್ಧೆ ಸೇರ್ಪಡೆಗೆ ಐಸಿಸಿ ಪ್ರಯತ್ನ!

ನವದೆಹಲಿ: ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಸೇರಿಸುವಲ್ಲಿ ಯಶಸ್ವಿಯಾಗಿರುವ ಐಸಿಸಿ ಇದೀಗ 2030ರ ಯೂತ್​ ಒಲಿಂಪಿಕ್ಸ್​ಗೂ ಕ್ರಿಕೆಟ್​ ಆಟವನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದೆ. ಯೂತ್​ ಒಲಿಂಪಿಕ್ಸ್​ ಕ್ರಿಕೆಟ್​ ಸೇರ್ಪಡೆಯ ಸಂಬಂಧ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ (ಐಒಸಿ) ಜತೆಗೆ ಚರ್ಚಿಸಲಾಗುವುದು ಎಂದು ಐಸಿಸಿ ಹೇಳಿದೆ. 2030ರ ಯೂತ್​ ಒಲಿಂಪಿಕ್​ ಗೇಮ್ಸ್​ ಆತಿಥ್ಯಕ್ಕೆ ಭಾರತ ಬಿಡ್​ ಸಲ್ಲಿಸಲು ಮುಂದಾಗಿರುವ ನಡುವೆ ಇದು ಮಹತ್ವದ ಹೆಜ್ಜೆಯಾಗಿದೆ.

2036ರ ಒಲಿಂಪಿಕ್ಸ್​ಗೆ ಬಿಡ್​ ಸಲ್ಲಿಸುವ ಯೋಜನೆಯಲ್ಲಿರುವ ಕೇಂದ್ರ ಸರ್ಕಾರ, ಅದಕ್ಕೆ ಮುನ್ನ 2030ರ ಯೂತ್​ ಒಲಿಂಪಿಕ್ಸ್​ಅನ್ನು ಮುಂಬೈನಲ್ಲಿ ನಡೆಸಲು ಯೋಜಿಸಿದೆ. ಒಂದು ವೇಳೆ ಭಾರತಕ್ಕೆ ಯೂತ್​ ಒಲಿಂಪಿಕ್ಸ್​ ಆತಿಥ್ಯ ಲಭಿಸಿದರೆ, ಕ್ರಿಕೆಟ್​ ಸೇರ್ಪಡೆಗೊಳಿಸುವ ಐಸಿಸಿಯ ಕೆಲಸವೂ ಸುಲಭವಾಗಲಿದೆ ಎನ್ನಲಾಗಿದೆ. 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಈಗಾಗಲೆ ಸೇರ್ಪಡೆಗೊಂಡಿದೆ. ಇದಕ್ಕೆ ಮುನ್ನ 1900ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಏಕೈಕ ಬಾರಿ ಕ್ರಿಕೆಟ್​ ಸ್ಪರ್ಧೆ ನಡೆದಿತ್ತು.

ಯೂತ್​ ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆಗೊಂಡರೆ, ಜಾಗತಿಕವಾಗಿ ತಳಮಟ್ಟದಿಂದ ಕ್ರಿಕೆಟ್​ ಅಭಿವೃದ್ಧಿಗೂ ನೆರವಾಗಲಿದೆ. ಪ್ರಮುಖವಾಗಿ ಐಸಿಸಿ ಅಸೋಸಿಯೇಟ್ಸ್​ ದೇಶಗಳಲ್ಲಿ ಕ್ರಿಕೆಟ್​ ಬೆಳವಣಿಗೆಗೆ ಕ್ರಾಂತಿಕಾರಿ ಬಲ ಲಭಿಸಲಿದೆ ಎಂದು ಐಸಿಸಿ ತಿಳಿಸಿದೆ. ಯೂತ್​ ಒಲಿಂಪಿಕ್ಸ್​ 15ರಿಂದ 18 ವಯೋಮಿತಿ ಕ್ರೀಡಾಪಟುಗಳಿಗೆ ಸೀಮಿತವಾಗಿದೆ. ಇದಕ್ಕೆ ಕ್ರಿಕೆಟ್​ ಸೇರ್ಪಡೆಯಾದರೆ, ಯುವ ಕ್ರಿಕೆಟಿಗರಿಗೆ ಜಾಗತಿಕ ಮಟ್ಟದ ವೇದಿಕೆ ಲಭಿಸಿದಂತಾಗುತ್ತದೆ.

ಕ್ರಿಕೆಟ್​ ಬ್ರ್ಯಾಂಡ್​ನಿಂದ ಒಲಿಂಪಿಕ್ಸ್​ ಬ್ರ್ಯಾಂಡ್​ಗೆ ಹೆಚ್ಚಿನ ಪ್ರಚಾರ ಲಭಿಸುತ್ತದೆ ಎಂಬುದನ್ನು ಐಒಸಿಗೆ ಮನದಟ್ಟು ಮಾಡಿಸುವಲ್ಲಿ ಐಸಿಸಿ ಈಗಾಗಲೆ ಯಶಸ್ವಿಯಾಗಿದೆ. ಹೀಗಾಗಿ ಯೂತ್​ ಒಲಿಂಪಿಕ್ಸ್​ಗೂ ಕ್ರಿಕೆಟ್​ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಐಸಿಸಿಗೆ ಹೆಚ್ಚಿನ ಕಷ್ಟ ಎದುರಾಗದು ಎನ್ನಲಾಗಿದೆ. 2022ರಲ್ಲಿ ಸೆನೆಗಲ್​ನಲ್ಲಿ ನಿಗದಿಯಾಗಿದ್ದ ಯೂತ್​ ಒಲಿಂಪಿಕ್ಸ್​ ಕರೊನಾದಿಂದಾಗಿ 2026ಕ್ಕೆ ಮುಂದೂಡಲ್ಪಟ್ಟಿದ್ದು, 2030ರ ಆವೃತ್ತಿಯ ಆತಿಥ್ಯವನ್ನು ಇನ್ನೂ ವಿತರಿಸಲಾಗಿಲ್ಲ.