ಅಶ್ವಿನಿ ಕೆ. ಭಟ್​-ಶಿಖಾ ಗೌತಮ್​  
ಕ್ರೀಡೆ

ಇಂಡಿಯಾ ಇಂಟರ್​ನ್ಯಾಷನಲ್​ ಚಾಲೆಂಜ್​: ಪ್ರಶಸ್ತಿ ಸುತ್ತಿಗೆ ಅಶ್ವಿನಿ-ಶಿಖಾ

ಮೂರನೇ ಶ್ರೇಯಾಂಕಿತ ಹಾಗೂ ಕನ್ನಡತಿಯರಾದ ಅಶ್ವಿನಿ ಕೆ. ಭಟ್​-ಶಿಖಾ ಗೌತಮ್​ ಅವರು "ಕೆಬಿಎ ಡೈಮಂಡ್​ ಜುಬಿಲಿ ಇಂಡಿಯಾ ಇಂಟರ್​ನ್ಯಾಷನಲ್​ ಚಾಲೆಂಜ್​' ಬ್ಯಾಡ್ಮಿಂಟನ್​ ಟೂರ್ನಿ ಮಹಿಳಾ ಡಬಲ್ಸ್​ನಲ್ಲಿ ಫೈನಲ್​ಗೇರಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ ಸ್ಥಳಿಯ ಆಟಗಾರ ಮಿಥುನ್​ ಮಂಜುನಾಥ್​ ಆಘಾತ ಎದುರಿಸಿದ್ದು, ಸತೀಶ್​ ಕುಮಾರ್​ ಕರುಣಾಕರನ್​ ಮತ್ತು ತಂಕರ ಜ್ಞಾನ ದತ್ತು ತಲಾಸಿಲ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ಬೆಂಗಳೂರು: ಮೂರನೇ ಶ್ರೇಯಾಂಕಿತ ಹಾಗೂ ಕನ್ನಡತಿಯರಾದ ಅಶ್ವಿನಿ ಕೆ. ಭಟ್​-ಶಿಖಾ ಗೌತಮ್​ ಅವರು "ಕೆಬಿಎ ಡೈಮಂಡ್​ ಜುಬಿಲಿ ಇಂಡಿಯಾ ಇಂಟರ್​ನ್ಯಾಷನಲ್​ ಚಾಲೆಂಜ್​' ಬ್ಯಾಡ್ಮಿಂಟನ್​ ಟೂರ್ನಿ ಮಹಿಳಾ ಡಬಲ್ಸ್​ನಲ್ಲಿ ಫೈನಲ್​ಗೇರಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ ಸ್ಥಳಿಯ ಆಟಗಾರ ಮಿಥುನ್​ ಮಂಜುನಾಥ್​ ಆಘಾತ ಎದುರಿಸಿದ್ದು, ಸತೀಶ್​ ಕುಮಾರ್​ ಕರುಣಾಕರನ್​ ಮತ್ತು ತಂಕರ ಜ್ಞಾನ ದತ್ತು ತಲಾಸಿಲ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

75 ವರ್ಷಗಳ ಸಂಭ್ರಮದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್​ ಸಂಸ್ಥೆ (ಕೆಬಿಎ) ಆತಿಥ್ಯದಲ್ಲಿ 26 ವರ್ಷಗಳ ನಂತರ ಉದ್ಯಾನಗರಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಟೂರ್ನಿ ಇದಾಗಿದ್ದು, ಶನಿವಾರ ನಡೆದ ಮಹಿಳಾ ಡಬಲ್ಸ್​ ಸೆಮಿಫೈನಲ್​ನಲ್ಲಿ ಅಶ್ವಿನಿ&ಶಿಖಾ ಜೋಡಿ 21-13, 18-21, 21-12 ಮೂರು ಗೇಮ್​ ಹೋರಾಟದಲ್ಲಿ ಭಾರತದವರೇ ಆದ ನೇಸಾ ಕಾರಿಯಪ್ಪ-ಪ್ರವಂಧಿಕಾ ರಾವನ್​ ಎದುರು ಗೆಲುವು ಒಲಿಸಿಕೊಂಡರು. 54 ನಿಮಿಷಗಳ ಸೆಣಸಾಟದಲ್ಲಿ ಮೇಲುಗೈ ಸಾಧಿಸಿದ ಅಶ್ವಿನಿ-ಶಿಖಾ, ಜಪಾನ್​ನ ಮಿಯಿ ಸುಡೊ&ಮೈ ತನಬೆ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಇನ್ನೊಂದು ಸೆಮೀಸ್​ನಲ್ಲಿ 5ನೇ ಶ್ರೇಯಾಂಕಿತ ಮಿಯಿ ಸುಡೊ-ಮೈ ತನಬೆ 21&8, 21&11 ರಿಂದ ಭಾರತದ ದೀಪಕ್​ ರಾಜ್​ ಅದಿತಿ& ಪೊನ್ನಮ್ಮ ಬಿ.ವಿ. ವೃದ್ಧಿ ಜೋಡಿಯನ್ನು ಮಣಿಸಿತು.

ಸಿಂಗಲ್ಸ್​ನಲ್ಲಿ ಅಗ್ರ ಶ್ರೇಯಾಂಕಿತೆ ಮಾನ್ಸಿ ಸಿಂಗ್​ 16-21, 18-21 ರಿಂದ ದೇಶಬಾಂಧವೆ ದಿಯಾಂಕಾ ವಾಲ್ದಿಯಾ ಎದುರು ಸೋತರು. ಇನ್ನೊಂದು ಪಂದ್ಯದಲ್ಲಿ ಅದಿತಿ ರಾವ್​ 13-21, 16-21 ರಿಂದ ಥಾಯ್ಲೆಂಡ್​ನ ಯಾಟವೀಮನ್​ ಕೆಟ್ಕಿಲಿಯೆಂಗ್​ ಎದುರು ಪರಾಭವಗೊಂಡರು.

ಮಿಥುನ್​ಗೆ ನಿರಾಸೆ, ಪ್ರತಿಕ್​ ಪ್ರಶಸ್ತಿ ಸನಿಹ

ಮಾಜಿ ರಾಷ್ಟ್ರೀಯ ಚಾಂಪಿಯನ್​ ಮಿಥುನ್​ ಮಂಜುನಾಥ್​ ಪುರುಷರ ಸಿಂಗಲ್ಸ್​ ಸೆಮಿಫೈನಲ್​ನಲ್ಲಿ ಭಾರತದವರೇ ಆದ ಸತೀಶ್​ ಕುಮಾರ್​ ಕರುಣಾಕರನ್​ 17-21, 22-20, 20-22 ರಿಂದ ಮೂರು ಗೇಮ್​ಗಳ ಕಠಿಣ ಹೋರಾಟದಲ್ಲಿ ಸೋಲು ಅನುಭವಿಸಿದರು. ತಂಕರ ಜ್ಞಾನ ದತ್ತು ತಲಾಸಿಲ 23-21, 21-16 ರಿಂದ ನಾಲ್ಕನೇ ಶ್ರೇಯಾಂಕಿತ ತುಷಾರ್​ ಸುವೀರ್​ ಎದುರು ಗೆದ್ದು ಫೈನಲ್​ಗೇರಿದರು. ಡಬಲ್ಸ್​ನಲ್ಲಿ ಕರ್ನಾಟಕದ ಕೆ. ಸಾಯಿ ಪ್ರತಿಕ್​-ಆರ್​. ರೆತಿನಸಬಾಪತಿ ಜೋಡಿ 21&18, 11&21, 26&24 ಮೂರು ಗೇಮ್​ಗಳ ನಿಕಟ ಪೈಪೋಟಿಯಲ್ಲಿ ಥಾಯ್ಲೆಂಡ್​ನ ರಣ್ಯು ಕಾವೋಸಮಾಂಗ್​-ಕಿಟ್ಟಿನುಪಾಂಗ್​ ಕೆಡ್ರೆನ್​ ಜೋಡಿಯನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿತು. ಮಿಶ್ರ ಡಬಲ್ಸ್​ನಲ್ಲಿ ಲಾಲ್​ರಾಮ್​ಸಂಗ-ಏಂಜೆಲ್​ ಪುನೇರಾ 21-11, 21-9 ರಿಂದ ದೇಶಬಾಂಧವರಾದ ವಿರಾಜ್​ ಕುವಲೆ&ಋತುಪರ್ಣಾ ಪಾಂಡ ಎದುರು ಜಯಿಸಿದರು.