ಕ್ರೀಡೆ

ಆಯ್ಕೆ ಗೊಂದಲದಲ್ಲಿ ಭಾರತ: 4ನೇ ಟೆಸ್ಟ್​ಗೆ 11ರ ಬಳಗ ಸಂಯೋಜನೆ ಸವಾಲು, ಕರುಣ್​ಗೆ ಕೊನೇ ಚಾನ್ಸ್​

ಮ್ಯಾಂಚೆಸ್ಟರ್​: ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಒಲಿಸಿಕೊಳ್ಳುವ ಆಸೆ ಜೀವಂತವಿಡಲು ಭಾರತ ತಂಡ ಅತಿಥೇಯ ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಜತೆಗೆ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ಇದುವರೆಗೆ ಒಂದೂ ಟೆಸ್ಟ್​ ಪಂದ್ಯವನ್ನು ಗೆಲ್ಲದ ಹಿನ್ನಡೆಯೂ ಇದೆ. ಇದೆಲ್ಲದರ ನಡುವೆ ತಂಡದ ಕೆಲ ಆಟಗಾರರ ಗಾಯದ ಸಮಸ್ಯೆಯಿಂದಾಗಿ, ಬುಧವಾರದಿಂದ ನಡೆಯಲಿರುವ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಆರಿಸುವುದೇ ದೊಡ್ಡ ಸವಾಲೆನಿಸಿದೆ.

ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದರೆ, ಎಡಗೈ ವೇಗಿ ಅರ್ಷದೀಪ್​ ಸಿಂಗ್​ 4ನೇ ಟೆಸ್ಟ್​ಗೆ ಅಲಭ್ಯರಾಗಿದ್ದಾರೆ. ಇನ್ನೋರ್ವ ವೇಗಿ ಆಕಾಶ್​ದೀಪ್​ ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಇದರೊಂದಿಗೆ ರಿಷಭ್​ ಪಂತ್​ ವಿಕೆಟ್​ ಕೀಪಿಂಗ್​ ನಿರ್ವಹಿಸಲು ಫಿಟ್​ ಆಗುವುದು ಅನುಮಾನವಿದೆ. ಇದರೊಂದಿಗೆ ಮ್ಯಾಂಚೆಸ್ಟರ್​ ಪಿಚ್​ನಲ್ಲಿ ಯಾವ ಬೌಲಿಂಗ್​ ಕಾಂಬಿನೇಷನ್​ ಕಣಕ್ಕಿಳಿಸಬೇಕು ಎಂಬ ಗೊಂದಲವೂ ಭಾರತವನ್ನು ಕಾಡುತ್ತಿದೆ. ನಾಲ್ವರು ವೇಗಿಗಳೊಂದಿಗೆ ಓರ್ವ ಸ್ಪಿನ್ನರ್​ ಸಾಕೇ ಅಥವಾ ಇಬ್ಬರು ವೇಗಿಗಳೊಂದಿಗೆ ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಬೇಕೇ ಎಂಬ ಬಗ್ಗೆ ಭಾರತ ತಂಡ ಚಿಂತನೆಯಲ್ಲಿದೆ.

ನಾಯಕ ಶುಭಮಾನ್​ ಗಿಲ್​ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅಂತಿಮವಾಗಿ ಯಾವ ತಂಡ ಸಂಯೋಜನೆಯನ್ನು ಕಣಕ್ಕಿಳಿಸಬಹುದು ಮತ್ತು ಅದು ಗೆಲ್ಲುವ ಕಾಂಬಿನೇಷನ್​ ಆಗಬಹುದೇ ಎಂಬುದನ್ನು ಕಾದುನೋಡಬೇಕಿದೆ.

ನಾಲ್ವರು ವೇಗಿಗಳು?

ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಈಗ ಮ್ಯಾಂಚೆಸ್ಟರ್​ ಟೆಸ್ಟ್​ನಲ್ಲೂ ಆಡುವುದು ಅನಿವಾರ್ಯವೆನಿಸಿದೆ. ಆಕಾಶ್​ದೀಪ್​, ಅರ್ಷದೀಪ್​ ಗಾಯದ ಸಮಸ್ಯೆ ಮತ್ತು ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ರೆಡ್ಡಿ ಗೈರಿನಲ್ಲಿ ಈಗ ಬುಮ್ರಾಗೆ ವಿಶ್ರಾಂತಿ ನೀಡುವುದು ಸಾಧ್ಯವಿಲ್ಲವೆನಿಸಿದೆ. ಅಲ್ಲದೆ ಮ್ಯಾಂಚೆಸ್ಟರ್​ನಲ್ಲಿ ನಾಲ್ವರು ವೇಗಿಗಳನ್ನು ಆಡಿಸುವ ಬಗ್ಗೆಯೂ ಭಾರತ ತಂಡ ಚಿಂತನೆ ನಡೆಸಿದೆ. ಬುಮ್ರಾ, ಸಿರಾಜ್​ ಜತೆಗೆ 24 ವರ್ಷದ ಅಂಶುಲ್​ ಕಾಂಬೋಜ್​ 3ನೇ ವೇಗಿಯಾಗಿ ಟೆಸ್ಟ್​ ಪದಾರ್ಪಣೆ ಮಾಡುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ. ಇದರೊಂದಿಗೆ 4ನೇ ವೇಗಿಯಾಗಿ ಶಾರ್ದೂಲ್​ ಠಾಕೂರ್​ರನ್ನು ಆಡಿಸಬೇಕೇ ಎಂಬ ಚಿಂತನೆಯೂ ಇದೆ. ಇದರಿಂದ ಬ್ಯಾಟಿಂಗ್​ ವಿಭಾಗಕ್ಕೂ ಸ್ವಲ್ಪ ಬಲ ಸಿಗಲಿದೆ. ಆಕಾಶ್​ದೀಪ್​ ಫಿಟ್​ ಆದರೆ ಅವರೂ 4ನೇ ವೇಗಿಯಾಗಿ ಆಡಬಹುದು.

ಕುಲದೀಪ್​ ಕೊನೆಗೂ ಕಣಕ್ಕೆ?

ಚೈನಾಮನ್​ ಸ್ಪಿನ್ನರ್​ ಕುಲದೀಪ್​ ಯಾದವ್​ ಕೊನೆಗೂ ಸರಣಿಯಲ್ಲಿ ಪಂದ್ಯವೊಂದನ್ನು ಆಡುವ ಸಾಧ್ಯತೆ ಹರಡಿದೆ. ಓಲ್ಡ್​ ಟ್ರಾರ್ಡ್​ ಮೈದಾನದ ಫ್ಲ್ಯಾಟ್​ ಪಿಚ್​ ಭಾರತ ತಂಡದ ಈ ಚಿಂತನೆಗೆ ಕಾರಣವಾಗಿದೆ. ಇಂಥ ಪಿಚ್​ನಲ್ಲಿ ಕುಲದೀಪ್​ ಅವರ ರಿಸ್ಟ್​ ಸ್ಪಿನ್​ ಭಾರತಕ್ಕೆ ಹೆಚ್ಚಿನ ಲಾಭ ತಂದುಕೊಡುವ ನಿರೀಕ್ಷೆ ಇದೆ. ಅಲ್ಲದೆ ಮ್ಯಾಂಚೆಸ್ಟರ್​ ಮೈದಾನ ಸ್ಪಿನ್ನರ್​ಗಳಿಗೆ ಹೆಚ್ಚಿನ ಸಹಕಾರ ನೀಡಿದ ಇತಿಹಾಸವನ್ನೂ ಹೊಂದಿದೆ.

ದಿಗ್ಗಜ ಶೇನ್​ ವಾರ್ನ್​ ಅವರ "ಶತಮಾನದ ಎಸೆತ' ಇಲ್ಲೇ ಬಂದಿತ್ತು. ಇಂಗ್ಲೆಂಡ್​ ಸ್ಪಿನ್​ ದಿಗ್ಗಜ ಜಿಮ್​ ಲೇಕರ್​ ಇಲ್ಲೇ ಇನಿಂಗ್ಸ್​ ಒಂದರ ಎಲ್ಲ 10 ವಿಕೆಟ್​ ಕಬಳಿಸಿದ್ದರು. ವಿಂಡೀಸ್​ನ ಲ್ಯಾನ್ಸ್​ ಗಿಬ್ಸ್​ ಮತ್ತು ಇಂಗ್ಲೆಂಡ್​ನ ಮಾಂಟಿ ಪಣೇಸರ್​ ಕೂಡ ಇಲ್ಲಿ ಹೆಚ್ಚಿನ ಯಶ ಕಂಡಿದ್ದಾರೆ. ಅಲ್ಲದೆ ಕಳೆದ ವರ್ಷ ಇಂಗ್ಲೆಂಡ್​ ತಂಡ ಭಾರತ ಪ್ರವಾಸಕ್ಕೆ ಬಂದಿದ್ದಾಗ ಕುಲದೀಪ್​ ಹೆಚ್ಚಾಗಿ ಕಾಡಿದ್ದರು.

ಹೀಗಾಗಿ ಕುಲದೀಪ್​, ವಾಷಿಂಗ್ಟನ್​ ಸುಂದರ್​ ಬದಲಿಗೆ ಅಥವಾ 3ನೇ ಸ್ಪಿನ್ನರ್​ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತ ತಂಡ ಸ್ಪಿನ್​ "ಕ್ವಾರ್ಟೆಟ್​ ಯುಗ'ದ (ಬಿಷನ್​ ಸಿಂಗ್​ ಬೇಡಿ, ಎರಪಳ್ಳಿ ಪ್ರಸನ್ನ, ಬಿಎಸ್​ ಚಂದ್ರಶೇಖರ್​, ಎಸ್​. ವೆಂಕಟರಾವನ್​ ನಾಲ್ವರೂ ಸ್ಪಿನ್ನರ್​ಗಳು ಜತೆಯಾಗಿ ಆಡುತ್ತಿದ್ದ ಕಾಲ) ನಂತರ ಎಂದೂ ಎರಡಕ್ಕಿಂತ ಇಬ್ಬರು ಸ್ಪಿನ್ನರ್​ಗಳನ್ನು ಆಡಿಸಿಲ್ಲ. ಈ ಬಾರಿ ಆ ಸಂಪ್ರದಾಯವನ್ನು ಮುರಿಯುವ ಸಾಧ್ಯತೆಯೂ ಹೆಚ್ಚಿದೆ.

ಕರುಣ್​ಗೆ ಕೊನೇ ಚಾನ್ಸ್​ 

ಎಂಟು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್​ ನಾಯರ್​ ಇದುವರೆಗೆ ಆಡಿರುವ 6 ಇನಿಂಗ್ಸ್​ಗಳಲ್ಲೂ ಎರಡನೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. 21.83ರ ಸರಾಸರಿಯಲ್ಲಿ 131 ರನ್​ ಮಾತ್ರ ಗಳಿಸಿದ್ದಾರೆ ಮತ್ತು 40 ರನ್​ ಗಳಿಸಿರುವುದೇ ಗರಿಷ್ಠವೆನಿಸಿದೆ. ಮ್ಯಾಂಚೆಸ್ಟರ್​ ಟೆಸ್ಟ್​ನಿಂದ ಅವರನ್ನು ಕೈಬಿಡಬೇಕೆಂದು ಈಗಾಗಲೆ ಕೆಲ ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಇದರ ನಡುವೆಯೂ ಟೀಮ್​ ಮ್ಯಾನೇಜ್​ಮೆಂಟ್​, ಮ್ಯಾಂಚೆಸ್ಟರ್​ನಲ್ಲಿ ಅವರಿಗೆ ಕೊನೆಯ ಅವಕಾಶವೊಂದನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಪಂತ್​ ಬ್ಯಾಟರ್​ ಮಾತ್ರ!

ಲಾರ್ಡ್ಸ್​ ಟೆಸ್ಟ್​ನ ಮೊದಲ ದಿನವೇ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದ ರಿಷಭ್​ ಪಂತ್​ ನಂತರ ವಿಕೆಟ್​ ಕೀಪಿಂಗ್​ ನಿರ್ವಹಿಸಿರಲಿಲ್ಲ. ಆದರೆ ಎರಡೂ ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ಮಾಡಿದ್ದರು. ಹೀಗಾಗಿ ಮ್ಯಾಂಚೆಸ್ಟರ್​ ಟೆಸ್ಟ್​ನಲ್ಲಿ ಕೀಪಿಂಗ್​ ನಿರ್ವಹಿಸಲು ಪಂತ್​ ಫಿಟ್​ ಆಗದಿದ್ದರೆ ಕೇವಲ ಬ್ಯಾಟರ್​ ಆಗಿ ಆಡುವ ಸಾಧ್ಯತೆ ಹೆಚ್ಚಿದೆ. ಆಗ ಧ್ರುವ ಜುರೆಲ್​ ವಿಕೆಟ್​ ಕೀಪರ್​ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ನಿತೀಶ್​ ಕುಮಾರ್​ ರೆಡ್ಡಿ ಸ್ಥಾನವನ್ನು ಜುರೆಲ್​ ತುಂಬುವ ನಿರೀೆ ಇದೆ. ಮ್ಯಾಂಚೆಸ್ಟರ್​ನಲ್ಲಿ ಪಂತ್​ ಕೀಪಿಂಗ್​ ಅಭ್ಯಾಸ ಮಾಡಿದ್ದರೂ, ಅವರ ಫಿಟ್ನೆಸ್​ ಬಗ್ಗೆ ಇನ್ನೂ ಅನುಮಾನವಿದೆ.

ನಿತೀಶ್​ ರೆಡ್ಡಿ ಪ್ರವಾಸದಿಂದ ಹೊರಕ್ಕೆ

ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಮೊಣಕಾಲು ಗಾಯದಿಂದಾಗಿ ಇಂಗ್ಲೆಂಡ್​ ಪ್ರವಾಸದಿಂದ ಸಂಪೂರ್ಣವಾಗಿ ಹೊರಬಿದ್ದಿರುವುದನ್ನು ಬಿಸಿಸಿಐ ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ. ಜತೆಗೆ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಗಾಯದಿಂದಾಗಿ 4ನೇ ಟೆಸ್ಟ್​ಗೆ ಅಲಭ್ಯರಾಗಿರುವುದನ್ನು ಮತ್ತು ಹರಿಯಾಣದ ವೇಗಿ ಅಂಶುಲ್​ ಕಾಂಬೋಜ್​ ಭಾರತ ತಂಡಕ್ಕೆ ಸೇರ್ಪಡೆಯಾಗಿರುವುದನ್ನೂ ಬಿಸಿಸಿಐ ಘೋಷಿಸಿದೆ. ಭಾನುವಾರ ಜಿಮ್​ನಲ್ಲಿ ವ್ಯಾಯಾಮ ನಡೆಸುತ್ತಿದ್ದ ವೇಳೆ ನಿತೀಶ್​ ರೆಡ್ಡಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು.

ಬಳಿಕ ಸ್ಕಾನ್​ ಮಾಡಿ ನೋಡಿದಾಗ ಅವರ ಅಸ್ಥಿರಜ್ಜುಗೆ ಹಾನಿಯಾಗಿರುವುದು ಖಚಿತಗೊಂಡಿದೆ. ಇದರಿಂದಾಗಿ ಅವರು ಕೂಡಲೆ ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಸರಣಿಯಲ್ಲಿ ಇದುವರೆಗೆ ಒಂದೂ ಟೆಸ್ಟ್​ ಆಡದ ಅರ್ಷದೀಪ್​ ನೆಟ್ಸ್​ನಲ್ಲಿ ಚೆಂಡನ್ನು ತಡೆಯುವ ವೇಳೆ ಕೈಬೆರಳು ಗಾಯಕ್ಕೊಳಗಾಗಿದ್ದು, ಅವರ ಚೇತರಿಕೆಗೆ ಕನಿಷ್ಠ 10 ದಿನ ಬೇಕಾಗಿದೆ. ಇದರಿಂದ ಅವರು ಸರಣಿಯ ಕೊನೇ ಟೆಸ್ಟ್​ಗೂ ಲಭ್ಯರಾಗುವ ಬಗ್ಗೆ ಅನುಮಾನವಿದೆ.