ಕ್ರೀಡೆ

Champions Trophy| ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ... ಸೆಮೀಸ್​ ಪ್ರವೇಶಿಸುತ್ತಿದ್ದಂತೆ ಭಾರತದ ವಿರುದ್ಧ ಕೇಳಿ ಬಂತು ಹೊಸ ಆರೋಪ

ನವದೆಹಲಿ: ಹಾಲಿ ನಡೆಯುತ್ತಿರುವ ಚಾಂಪಿಯನ್ಸ್​ ಟ್ರೋಫಿಯಲ್ಲಿ (Champions Trophy) ಭಾರತ ತಂಡ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಆತಿಥೇಯ ಪಾಕಿಸ್ತಾನಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಭದ್ರತೆಯ ಕಾರಣ ನೀಡಿ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಆಡುತ್ತಿದ್ದು, ಭಾರತ ತಂಡಕ್ಕೆ ದುಬೈ ಸ್ಟೇಡಿಯಂನ ಲಾಭ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್​ ಕಮ್ಮಿನ್ಸ್​ ಮಾತನಾಡಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಪ್ಯಾಟ್ ಕಮ್ಮಿನ್ಸ್​​ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಸ್ಟೀವ್ ಸ್ಮಿತ್​ಗೆ ಹಂಗಾಮಿ ನಾಯಕತ್ವವನ್ನು ವಹಿಸಲಾಗಿದೆ. ಇದೀಗ ತಮ್ಮ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುವುದರಿಂದ ಭಾರತಕ್ಕೆ ಅನುಕೂಲವಾಗುತ್ತದೆ ಎಂದು ಪ್ಯಾಟ್​ ಕಮ್ಮಿನ್ಸ್​ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.  ಟೂರ್ನಮೆಂಟ್ ಮುಂದುವರೆಯುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ, ಆದರೆ ನಿಸ್ಸಂಶಯವಾಗಿ ಭಾರತಕ್ಕೆ ದುಬೈ ಕ್ರೀಡಾಂಗಣದಲ್ಲಿ ಆಡುತ್ತಿರುವುದು ಹೆಚ್ಚು ಲಾಭವಾಗುತ್ತದೆ. ಅವರು ಈಗಾಗಲೇ ತುಂಬಾ ಬಲಶಾಲಿಯಾಗಿ ಕಾಣುತ್ತಾರೆ ಮತ್ತು ಅವರು ತಮ್ಮ ಎಲ್ಲಾ ಆಟಗಳನ್ನು ಅಲ್ಲಿ ಆಡುವ ಮೂಲಕ ಸ್ಪಷ್ಟ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಪ್ಯಾಟ್ಸ್​ ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ. 

ಆತಿಥೇಯರಿಗೆ ಭಾರೀ ಮುಖಭಂಗ 

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy) ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಭರವಸೆಯನ್ನು ಹುಸಿಗೊಳಿಸಿತು. ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಟೂರ್ನಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ಭಾರೀ ಮುಖಭಂಗವನ್ನುಂಟು ಮಾಡಿದೆ.

ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ತಂಡವೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ಗಿಂತ ಮೊದಲು ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.