ಕೋಲ್ಕತ: ಐದು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ವಿರುದ್ಧದ ಮೊಟ್ಟಮೊದಲ ಮುಖಾಮುಖಿಯಲ್ಲಿ ಭಾರತ ತಂಡ ದಿಟ್ಟ ನಿರ್ವಹಣೆ ತೋರಿದ ನಡುವೆ 0-4 ಅಂತರದಿಂದ ಪರಾಭವಗೊಂಡಿತು. ಸಾಲ್ಟ್ಲೇಕ್ ಮೈದಾನದಲ್ಲಿ ಶನಿವಾರ ನಡೆದ ಬಹುನಿರೀಕ್ಷಿತ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಭಾರತ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ತಲಾ 2 ಗೋಲು ಬಿಟ್ಟುಕೊಟ್ಟಿತು.
ಸಾಂಬಾ ನಾಡಿನ ತಂಡದ ಪರ ಇಸ್ಟೆವಾವೊ ವಿಲಿಯನ್ (28ನೇ ನಿಮಿಷ), ಪೆಡ್ರೋ (42) ತಲಾ ಒಂದು ಗೋಲು ಬಾರಿಸಿದರೆ, ಸ್ಯಾಮ್ಯುಯೆಲ್ ಲಿನೋ (58 ಮತ್ತು 90+5) ದ್ವೀತಿಯಾರ್ಧದಲ್ಲಿ ಎರಡು ಗೋಲು ಸಿಡಿಸಿದರು. ಬ್ರೆಜಿಲ್ ಸ್ಟಾರ್ ಆಟಗಾರ ವಿನಿಶಿಯಸ್ ಜೂನಿಯರ್, ಗೋಲು ಗಳಿಸಲು ಶಕ್ತರಾಗಲಿಲ್ಲ. ವಿಶ್ವ ನಂ. 5 ಬ್ರೆಜಿಲ್ ವಿರುದ್ಧದ ಈ ಕಾದಾಟದಲ್ಲಿ ಬ್ಲೂ ಟೈಗರ್ಸ್ ಖ್ಯಾತಿಯ ವಿಶ್ವ ನಂ. 138 ಭಾರತ ತಂಡ ಸಮಾಧಾನಕರ ಸೋಲನ್ನೇ ಕಂಡಿತು. ಪಂದ್ಯದ ಮೊದಲ 25 ನಿಮಿಷಗಳ ಭಾರತ ಅದ್ಭುತ ಆಟ ಪ್ರದರ್ಶಿಸಿ ಗೋಲು ಗಳಿಸುವ ಸನಿಹವೂ ಬಂದಿತ್ತು. ಆದರೆ ಬಳಿಕ ಬ್ರೆಜಿಲ್ ತನ್ನ ಕಾರ್ಯತಂತ್ರದ ಪ್ರಕಾರ ಆಕ್ರಮಣಕ್ಕಿಳಿಯುತ್ತಿದ್ದಂತೆ ಭಾರತ ತಂಡ ಗೋಲು ಬಿಟ್ಟುಕೊಡಲಾರಂಭಿಸಿತು.
ದುಬಾರಿ ಟಿಕೆಟ್ ದರದ ನಡುವೆ ಪಂದ್ಯಕ್ಕೆ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಹಾಜರಾಗಿ ಪ್ರವಾಸಿ ಬ್ರೆಜಿಲ್ ಆಟವನ್ನು ಸವಿದರು ಮತ್ತು ಆತಿಥೇಯ ಭಾರತ ತಂಡವನ್ನು ಪ್ರೋತ್ಸಾಹಿಸಿದರು.