ಮುಂಬೈ: ತವರಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರಿರುವ ನಡುವೆಯೂ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿರುವ ಭಾರತ ತಂಡ ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಮತ್ತು 7 ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ಬಲಿಷ್ಠ ತಂಡವೆನಿಸಿರುವ ಅಲಿಸ್ಸಾ ಹೀಲಿ ಪಡೆಯನ್ನು ಮಣಿಸಿ ಫೈನಲ್ಗೇರಿದರೆ ಭಾರತ ತಂಡ "ಅರ್ಧ ಟ್ರೋಫಿ' ಗೆದ್ದಂತೆಯೇ ಆಗಲಿದೆ. ಚೊಚ್ಚಲ ಐಸಿಸಿ ಟ್ರೋಫಿ ಜಯಿಸುವ ಹರ್ಮಾನ್ಪ್ರೀತ್ ಕೌರ್ ಬಳಗದ ಕನಸು ನನಸಾಗಿಸುವ ದೃಷ್ಟಿಯಿಂದ ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮಿನಿಫೈನಲ್ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಲೀಗ್ ಹಂತದಲ್ಲಿ ಆರಂಭಿಕ 2 ಪಂದ್ಯಗಳ ಗೆಲುವಿನ ಬಳಿಕ ಸತತ 3 ಸೋಲು ಕಂಡಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯ ಗೆದ್ದು ಸೆಮೀಸ್ ಸ್ಥಾನ ಖಾತ್ರಿಪಡಿಸಿಕೊಂಡಿತ್ತು. ಬಾಂಗ್ಲಾ ವಿರುದ್ಧದ ಕೊನೇ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಮತ್ತೊಂದೆಡೆ ಆಸೀಸ್ ಲೀಗ್ ಹಂತದಲ್ಲಿ 6 ಪಂದ್ಯಗಳಲ್ಲಿ ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಲೀಗ್ ಹಂತದಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 330 ರನ್ ಪೇರಿಸಿದ್ದರೂ, ಅದನ್ನು ರಸಿಕೊಳ್ಳುವಲ್ಲಿ ವಿಲವಾಗಿತ್ತು. ಆಗ ಮಾಡಿದ್ದ ಕೆಲ ತಪ್ಪುಗಳನ್ನು ಭಾರತ ಈ ಬಾರಿ ಸುಧಾರಿಸಿಕೊಂಡರೆ ಗೆಲುವು ಕಠಿಣವಲ್ಲ.
ತಂಡ ಸಂಯೋಜನೆ ಗೊಂದಲ: ಭಾರತ ಟೂರ್ನಿಯುದ್ದಕ್ಕೂ ಆಡುವ 11ರ ಬಳಗದ ಸಂಯೋಜನೆಯ ಗೊಂದಲ ಎದುರಿಸುತ್ತ ಬಂದಿದೆ. ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಗಾಯದಿಂದಾಗಿ ಸೆಮೀಸ್ಗೆ ಅಲಭ್ಯರಾಗಿರುವುದರಿಂದ ಭಾರತ ಇದೀಗ ಮತ್ತೊಮ್ಮೆ ಗೊಂದಲದಲ್ಲಿದೆ. ಬದಲಿ ಬ್ಯಾಟರ್ ಆಗಿ ಶೆಫಾಲಿ ವರ್ಷ ಅವರನ್ನು ಸೇರಿಸಿಕೊಂಡಿದ್ದರೂ, 11ರ ಬಳಗದಲ್ಲಿ ಕಣಕ್ಕಿಳಿಸುವ ಖಾತ್ರಿ ಇಲ್ಲ. ಶೆಫಾಲಿ ಬಿರುಸಿನಾಟ ಎದುರಾಳಿ ಮೇಲೆ ಒತ್ತಡ ಹೇರಬಹುದಾದರೂ, ಸ್ಮೃತಿ ಮಂದನಾ ಜತೆಗೆ ಅವರ ಆರಂಭಿಕ ಜತೆಯಾಟದ ದಾಖಲೆ ಉತ್ತಮವಾಗಿಲ್ಲ. ಹೀಗಾಗಿ ಹರ್ಲೀನ್ ಡಿಯೋಲ್ಗೆ ಆರಂಭಿಕ ಆಟಗಾರ್ತಿಯಾಗಿ ಬಡ್ತಿ ನೀಡಿ, 6ನೇ ಬೌಲರ್ ಕಣಕ್ಕಿಳಿಸುವ ಚಿಂತನೆ ನಡೆದಿದೆ. ಮತ್ತೊಂದೆಡೆ ಸ್ನೇಹಾ ರಾಣಾ ಬದಲಿಗೆ ಎಡಗೈ ಸ್ಪಿನ್ನರ್ ರಾಧಾ ಯಾದವ್ರನ್ನು ಆಡಿಸುವ ಸಾಧ್ಯತೆಗಳಿವೆ. ಕೊನೇ ಲೀಗ್ ಪಂದ್ಯದಿಂದ ಸ್ನೇಹಾಗೆ ವಿಶ್ರಾಂತಿ ನೀಡಿದಾಗ, ಬಾಂಗ್ಲಾ ಎದುರು ರಾಧಾ ಬೌಲಿಂಗ್ನಲ್ಲಿ ಮಿಂಚಿದ್ದರು. ಅತ್ತ ಸ್ನೇಹಾ, ಕೊನೇ 3 ಪಂದ್ಯಗಳಲ್ಲಿ 1 ವಿಕೆಟ್ಗೆ 201 ರನ್ ಬಿಟ್ಟುಕೊಟ್ಟಿದ್ದರು.
ಆಸ್ಟ್ರೆಲಿಯಾ ತಂಡಕ್ಕೂ ಗಾಯದ ಹಿನ್ನಡೆಗಳಿದ್ದು, ನಾಯಕಿ ಅಲಿಸ್ಸಾ ಹೀಲಿ ಸೆಮೀಸ್ನಲ್ಲಿ ಆಡುವ ಬಗ್ಗೆ ಇನ್ನೂ ಖಾತ್ರಿ ದೊರೆತಿಲ್ಲ. ಅವರು ಲೀಗ್ನಲ್ಲಿ ಗಾಯದಿಂದಾಗಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಟೂರ್ನಿಯಲ್ಲಿ 2 ಶತಕ ಸಿಡಿಸಿರುವ ಅಲಿಸ್ಸಾ ಹೀಲಿ ಲಭ್ಯರಾದರೆ ಆಸೀಸ್ ಬಲ ಹೆಚ್ಚಲಿದೆ. ಆಶ್ಲೆ ಗಾರ್ಡ್ನರ್, ಆನ್ನಾಬೆಲ್ ಸುದರ್ಲ್ಯಾಂಡ್ ಆಲ್ರೌಂಡ್ ನಿರ್ವಹಣೆ ಜತೆಗೆ ಅಲನಾ ಕಿಂಗ್ ಸ್ಪಿನ್ ದಾಳಿಯೂ ಆಸೀಸ್ ಅಜೇಯ ಓಟಕ್ಕೆ ನೆರವಾಗಿದೆ.
*ಮುಖಾಮುಖಿ: 60
ಭಾರತ: 11
ಆಸ್ಟ್ರೆಲಿಯಾ: 49
*ವಿಶ್ವಕಪ್ನಲ್ಲಿ: 14
ಭಾರತ: 3
ಆಸ್ಟ್ರೆಲಿಯಾ: 11
*ಆರಂಭ: ಮಧ್ಯಾಹ್ನ 3.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಹರ್ಮಾನ್ ಪಡೆಗೆ ಇತಿಹಾಸದ ಸ್ಫೂರ್ತಿ
ಭಾರತಕ್ಕೆ 2017ರ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತದಲ್ಲೇ ಆಸ್ಟ್ರೆಲಿಯಾವನ್ನು ಮಣಿಸಿ ಫೈನಲ್ಗೇರಿದ್ದು, ಈ ಬಾರಿ ಸ್ಫೂರ್ತಿಯ ಅಂಶವಾಗಿದೆ. ಆಗ ಹರ್ಮಾನ್ಪ್ರೀತ್ 115 ಎಸೆತಗಳಲ್ಲಿ ಅಜೇಯ 171 ರನ್ ಸಿಡಿಸಿ ಆಸೀಸ್ ತಂಡವನ್ನು ಫೈನಲ್ಗೇರದಂತೆ ತಡೆದಿದ್ದರು. 8 ವರ್ಷಗಳ ಹಿಂದಿನ ಅದೇ ಬಲಿಷ್ಠ ನಿರ್ವಹಣೆಯನ್ನು ಪುನರಾವರ್ತಿಸಿದರೆ ಭಾರತ, ತವರಿನ ವಿಶ್ವಕಪ್ನಲ್ಲೂ ಫೈನಲ್ಗೇರಿದ ಅಮೋಘ ಸಾಧನೆ ಮಾಡಬಹುದಾಗಿದೆ. ಪ್ರಮುಖವಾಗಿ ಹರ್ಮಾನ್ಪ್ರೀತ್ ಲಯಕ್ಕೆ ಮರಳಬೇಕಿದೆ. ಸ್ಮೃತಿ 1 ಶತಕ, 2 ಅರ್ಧಶತಕ ಸಹಿತ 365 ರನ್ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್.
*3: ಭಾರತ ತಂಡ 3ನೇ ಬಾರಿ ಏಕದಿನ ವಿಶ್ವಕಪ್ ಫೈನಲ್ಗೇರುವ ಕನಸಿನಲ್ಲಿದೆ. ಈ ಮುನ್ನ 2005 ಮತ್ತು 2017ರಲ್ಲಿ ಈ ಸಾಧನೆ ಮಾಡಿತ್ತು.
*10: ಈ ಹಿಂದಿನ 12 ವಿಶ್ವಕಪ್ಗಳಲ್ಲಿ ಆಸೀಸ್ 9 ಬಾರಿ ಫೈನಲ್ಗೇರಿದ್ದು, ಈ ಬಾರಿ 10ನೇ ಫೈನಲ್ ಗುರಿಯಲ್ಲಿದೆ. ಈ ಹಿಂದೆ 1993, 2009, 2017ರಲ್ಲಿ ಮಾತ್ರ ಫೈನಲ್ಗೇರಿರಲಿಲ್ಲ.
ಕಾಡುತ್ತಿದೆ ಮಳೆ ಭೀತಿ
ಲೀಗ್ನಲ್ಲಿ ಐದು ಪಂದ್ಯಗಳು ಮಳೆಯಿಂದ ರದ್ದುಗೊಂಡಿದ್ದರೆ, 2ನೇ ಸೆಮೀಸ್ಗೂ ಮಳೆ ಅಡಚಣೆ ತರುವ ಸಾಧ್ಯತೆಗಳಿವೆ. ಆದರೆ ಪಂದ್ಯಕ್ಕೆ ಮೀಸಲು ದಿನದ (ಶುಕ್ರವಾರ) ಅನುಕೂಲವಿದೆ. ಮೀಸಲು ದಿನವೂ ಫಲಿತಾಂಶ ಬಾರದಿದ್ದರೆ ಅಂಕಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿರುವ ತಂಡ ಫೈನಲ್ಗೇರಲಿದೆ.