ಕರ್ನಾಟಕದ ಪ್ಯಾರಾ ಅಥ್ಲೀಟ್​ ರಕ್ಷಿತಾ ರಾಜು ಸಂಗ್ರಹ ಚಿತ್ರ
ಕ್ರೀಡೆ

ಇಂದಿನಿಂದ ಏಷ್ಯನ್​ ಪ್ಯಾರಾ ಗೇಮ್ಸ್​: ಭರ್ಜರಿ ಪದಕ ಬೇಟೆಗೆ ಸಜ್ಜಾದ ಭಾರತ

ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ 7 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.

ಐಚಿ-ನಗೋಯಾ: ಕಾಮನ್ವೆಲ್ತ್​ ಗೇಮ್ಸ್​-ಏಷ್ಯನ್​ ಗೇಮ್ಸ್​ ಬಳಿಕ ಹಾಲಿ ವರ್ಷದ ಮತ್ತೊಂದು ಪ್ರಮುಖ ಕ್ರೀಡಾಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. 5ನೇ ಆವೃತ್ತಿಯ ಏಷ್ಯನ್​ ಪ್ಯಾರಾ ಗೇಮ್ಸ್​ಗೆ ಭಾನುವಾರ ಜಪಾನ್​ನ ಐಚಿ-ನಗೋಯಾದಲ್ಲಿ ಚಾಲನೆ ದೊರೆಯಲಿದೆ. ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ 7 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 20ನೇ ಆವೃತ್ತಿಯ ಏಷ್ಯಾಡ್​ ನಡೆದ ತಾಣಗಳಲ್ಲೇ, ಪ್ಯಾರಾ ಕ್ರೀಡಾಪಟುಗಳ ಏಷ್ಯನ್​ ಕ್ರೀಡಾಹಬ್ಬವೂ ಆಯೋಜನೆಗೊಂಡಿದೆ. ಕ್ರೀಡಾಕೂಟದಲ್ಲಿ 45 ದೇಶಗಳಿಂದ ಸುಮಾರು 3 ಸಾವಿರ ಪ್ಯಾರಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸೋಮವಾರದಿಂದ ಪದಕ ಸ್ಪರ್ಧೆಗಳು ನಡೆಯಲಿವೆ.

ಪಲೋಮಾ ಮಿಜುಹೊ ಸ್ಟೇಡಿಯಂನಲ್ಲಿ ನಡೆಯಲಿರುವ 2 ಗಂಟೆಗಳ ಆರಂಭೋತ್ಸವದಲ್ಲಿ ಆತಿಥೇಯ ಜಪಾನ್​ನ ಸಾಂಸತಿಕ ಮತ್ತು ತಂತ್ರಜ್ಞಾನಗಳ ವೈಭವ ಅನಾವರಣಗೊಳ್ಳಲಿದೆ. "ನಾವು ಸುಂದರ ವ್ಯಕ್ತಿಗಳು' ಎಂಬುದು ಉದ್ಘಾಟನಾ ಸಮಾರಂಭದ ಪ್ರಮುಖ ಪರಿಕಲ್ಪನೆಯಾಗಿದೆ. ಕ್ರೀಡಾಪಟುಗಳ ಪಥ ಸಂಚಲನದಲ್ಲಿ ಪ್ಯಾರಾ ಬ್ಯಾಡ್ಮಿಂಟನ್​ ಆಟಗಾರ ಪ್ರಮೋದ್​ ಭಗತ್​ ಮತ್ತು ಅಥ್ಲೀಟ್​ ಸಿಮ್ರನ್​ ಶರ್ಮ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

*ಉದ್ಘಾಟನಾ ಸಮಾರಂಭ ಆರಂಭ: ಮಧ್ಯಾಹ್ನ 2.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

90 ಪ್ಲಸ್​ ಪದಕಗಳ ಗುರಿ

ಭಾರತ 112 ಪುರುಷ, 156 ಮಹಿಳೆಯರ ಸಹಿತ ಒಟ್ಟು 168 ಅಂಗವಿಕಲ ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಕಣಕ್ಕಿಳಿಯಲಿದೆ. ಭಾರತ ಕಳೆದ ಆವೃತ್ತಿಯಲ್ಲಿ ಪದಕಗಳ ಶತಕ ಬಾರಿಸಿ ಐತಿಹಾಸಿಕ ಸಾಧನೆ ಮೆರೆದಿತ್ತು. ಆದರೆ ಈ ಬಾರಿ ಭಾರತದ ಕೋಟಾ ಸ್ಥಾನ ಕಡಿತಗೊಳಿಸಿದ್ದರಿಂದ ಕ್ರೀಡಾಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಭಾರತ ಈ ಬಾರಿ 90ಕ್ಕಿಂತ ಅಧಿಕ ಪದಕಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. 2024ರ ಪ್ಯಾರಿಸ್​ ಪ್ಯಾರಾಲಿಂಪಿಕ್​ನಲ್ಲಿ ಪದಕಗಳನ್ನು ಗೆದ್ದ ಭಾರತದ ಹೆಚ್ಚಿನ ಕ್ರೀಡಾಪಟುಗಳು ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಕಳೆದ ಆವೃತ್ತಿಯ ಪ್ಯಾರಾ ಏಷ್ಯಾಡ್​ನಲ್ಲಿ ಭಾರತ ಅಥ್ಲೆಟಿಕ್ಸ್​ನಲ್ಲೇ 55 ಪದಕಗಳನ್ನು (18 ಚಿನ್ನ, 17 ಬೆಳ್ಳಿ, 20 ಕಂಚು) ಗೆದ್ದುಕೊಂಡಿತ್ತು. ಈ ಬಾರಿ ಅಥ್ಲೆಟಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳ ಸಂಖ್ಯೆ 123ರಿಂದ 62ಕ್ಕೆ (46 ಪುರುಷ, 16 ಮಹಿಳೆ) ಇಳಿಕೆಯಾಗಿದೆ. ಇನ್ನು ಬ್ಯಾಡ್ಮಿಂಟನ್​, ಶೂಟಿಂಗ್​, ಆರ್ಚರಿ, ಟೇಬಲ್​ ಟೆನಿಸ್​ನಲ್ಲೂ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀೆ ಇದೆ.

ರಾಜ್ಯದ 12 ಕ್ರೀಡಾಪಟುಗಳು

ಪ್ಯಾರಾ ಏಷ್ಯಾಡ್​ನಲ್ಲಿ ಕರ್ನಾಟಕದ 12 ಪ್ಯಾರಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್​ನಲ್ಲಿ ರಾಧಾ ವೆಂಕಟೇಶ್​, ರಕ್ಷಿತಾ ರಾಜು, ಸೌಮ್ಯಾ, ಶರತ್​ ಎಂ.ಎಸ್​, ಈಜುಸ್ಪರ್ಧೆಯಲ್ಲಿ ನಿರಂಜನ್​ ಮುಕುಂದನ್​, ಗೋಪಿಚಂದ್​ ಲಿಂಗುಟ್ಲಾ, ಸ್ವಾತಿಕ್​ ಪಾಟೀಲ್​, ತೇಜಸ್​ ನಂದಕುಮಾರ್​, ಟೇಬಲ್​ ಟೆನಿಸ್​ನಲ್ಲಿ ಸವಿತಾ ವಿಟ್ಟಲ್​ ಅಜ್ಜನಕಟ್ಟಿ, ಶೂಟಿಂಗ್​ನಲ್ಲಿ ರಾಕೇಶ್​ ನಿಡಗುಂದಿ, ಬ್ಯಾಡ್ಮಿಂಟನ್​ನಲ್ಲಿ ಪಲ್ಲವಿ ಕೆ. ಮಂಜುನಾಥ್​ ಸ್ಪರ್ಧಿಸಲಿದ್ದಾರೆ. ಜತೆಗೆ ಉತ್ತರ ಪ್ರದೇಶದಲ್ಲಿ ಐಎಎಸ್​ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ಸುಹಾಸ್​ ಯತಿರಾಜ್​ ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಸ್ಪರ್ಧಿಸಲಿದ್ದಾರೆ.

*489: ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ 18 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಒಟ್ಟಾರೆ 489 ಸ್ವರ್ಣ ಪದಕಗಳು ಪಣಕ್ಕಿವೆ. ಈ ಪೈಕಿ ಭಾರತ 11 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.

ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಭಾರತ

ವರ್ಷ ಚಿನ್ನ ಬೆಳ್ಳಿ ಕಂಚು ಒಟ್ಟು ಸ್ಥಾನ

2010 1 4 9 14 15

2014 3 14 16 33 15

2018 15 24 33 72 9

2023 27 32 49 108 5

ಒಟ್ಟು 46 74 107 227 9

ನ್ಯೂನತೆಗೆ ತಕ್ಕಂತೆ ವರ್ಗೀಕರಣ

ಪ್ಯಾರಾ ಕ್ರೀಡೆಯಲ್ಲಿ ಕ್ರೀಡಾಪಟುಗಳ ಅಂಗ ನ್ಯೂನತೆಗೆ ತಕ್ಕಂತೆ ಅವರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೆಲವು ಕ್ರೀಡೆಗಳಲ್ಲಿ ಒಂದೇ ವಿಭಾಗದಲ್ಲಿ ಹಲವು ವರ್ಗೀಕರಣದೊಂದಿಗೆ ಪ್ರತ್ಯೇಕವಾದ ಸ್ಪರ್ಧೆಗಳು ನಡೆಯುತ್ತವೆ. ಉದಾಹರಣೆಗೆ ಪ್ಯಾರಾ ಬ್ಯಾಡ್ಮಿಂಟನ್​ನಲ್ಲೇ ಸಿಂಗಲ್ಸ್​ ವಿಭಾಗದಲ್ಲಿ 6 ಭಿನ್ನ ವರ್ಗೀಕರಣದೊಂದಿಗೆ ಸ್ವರ್ಣ ಪದಕಕ್ಕೆ ಸ್ಪರ್ಧೆ ನಡೆಯುತ್ತವೆ. ಪುರುಷರ 100 ಮೀ. ಓಟದಲ್ಲಿ ಒಟ್ಟು 15 ವರ್ಗೀಕರಣದೊಂದಿಗೆ ಸ್ಪರ್ಧೆ ನಡೆಯುತ್ತವೆ.