ಕ್ರೀಡೆ

ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಭಾರತ; ಪ್ಯಾರಿಸ್​ನಲ್ಲಿ ಭರವಸೆಯ ಬೆಳಕು...

ಬೆಂಗಳೂರು: ಪ್ಯಾರಿಸ್​ ಎಂಬ ಪ್ರೇಮನಗರಿಯಲ್ಲಿ ಭಾರತದ ಪದಕ ಗೆಲುವಿನ ಪ್ರೀತಿ ಲಿಸಿದ್ದಕ್ಕಿಂತ, ಭಗ್ನಗೊಂಡಿದ್ದೇ ಹೆಚ್ಚು. ಹೀಗಾಗಿ ಒಲಿಂಪಿಕ್ಸ್​ ಇತಿಹಾಸದಲ್ಲಿ ಮೊದಲ ಬಾರಿಗೆ 10 ಅಥವಾ ಅದಕ್ಕಿಂತ ಹೆಚ್ಚಿನ ಪದಕ ಬೇಟೆಯಾಡುವ ಭಾರತದ ಕನಸು ಕೂಡ ನನಸಾಗಲಿಲ್ಲ. ಹಾಗೆಂದು ಭಾರತದ ನಿರ್ವಹಣೆ ತೀರಾ ಕಳಪೆಯಾಗಿಯೂ ಇರಲಿಲ್ಲ. ಮೊದಲ ಬಾರಿ 5 ಕಂಚಿನ ಪದಕ ಬೇಟೆಯಾಡಿರುವ ಭಾರತ, ನಿರ್ಣಾಯಕ ಟ್ಟದಲ್ಲಿ ಮುಗ್ಗರಿಸದೆ ಇನ್ನೊಂದಿಷ್ಟು ನಿರ್ವಹಣೆ ಸುಧಾರಿಸಿದ್ದರೆ ಶ್ರೇಷ್ಠ ಸಾಧನೆಯನ್ನೇ ಮಾಡಬಹುದಾಗಿತ್ತು. ಒಟ್ಟಾರೆ ಪ್ಯಾರಿಸ್​ನಲ್ಲಿ 117 ಕ್ರೀಡಾಪಟುಗಳ ಭಾರತ ತಂಡ ಆರಕ್ಕೇರದೆ, ಮೂರಕ್ಕಿಳಿಯದಂಥ ನಿರ್ವಹಣೆಯನ್ನು ಪ್ರದರ್ಶಿಸಿತು.

ಖೇಲೋ ಇಂಡಿಯಾ, ಟಾರ್ಗೆಟ್​ ಒಲಿಂಪಿಕ್ಸ್​ ಪೋಡಿಯಂನಂಥ ಕೇಂದ್ರ ಸರ್ಕಾರದ ಪ್ರಮುಖ ಕ್ರೀಡಾ ಯೋಜನೆಗಳಿಂದ ಭಾರತ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಏಷ್ಯಾಡ್​ನಲ್ಲಿ ಭಾರತ ಪದಕಗಳ ಶತಕ ಬಾರಿಸಿದ್ದು ಇದಕ್ಕೆ ಸಾ. ಆದರೆ ಜಾಗತಿಕ ಮಟ್ಟದ ಕ್ರೀಡಾ ವೇದಿಕೆಯಲ್ಲಿ ಸಿಗುವ ಪ್ರಚಾರ, ಎದುರಾಳಿಗಳ ಸ್ಟಾರ್​ ಬಲ ಭಾರತದ ಕ್ರೀಡಾಪಟುಗಳಿಗೆ ಮಾನಸಿಕವಾಗಿ ಸ್ವಲ್ಪ ಒತ್ತಡ ಹೇರಿ ಹಿನ್ನಡೆ ತಂದಿದೆ. 2 ಕಂಚು ಗೆದ್ದಿದ್ದ ಮನು ಭಾಕರ್​ 3ನೇ ಸ್ಪರ್ಧೆಯಲ್ಲಿ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶ ಹೊಂದಿದ್ದರೂ, ಕೊನೇಕ್ಷಣದಲ್ಲಿ ಮುಗ್ಗರಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆರ್ಚರಿಯಲ್ಲಿ ದಕ್ಷಿಣ ಕೊರಿಯಾ, ಕುಸ್ತಿಯಲ್ಲಿ ಜಪಾನ್​ ಸಹಿತ ಆಯಾ ಕ್ರೀಡೆಯಲ್ಲಿ ಬಲಿಷ್ಠವಾಗಿರುವ ದೇಶದ ಸ್ಪರ್ಧಿಗಳು ಎದುರಾದಾಗ ಭಾರತೀಯರಲ್ಲಿ ಸ್ವಲ್ಪ ಅಳುಕು ಮೂಡಿದಂತಿತ್ತು. ಇದೇ ನಿರ್ವಹಣೆಯ ಮೇಲೂ ಪರಿಣಾಮ ಬೀರಿತು. ಹೀಗಾಗಿ ಭಾರತದ ಕ್ರೀಡಾಪಟುಗಳು ಮಾನಸಿಕವಾಗಿಯೂ ಬಲಿಷ್ಠರಾಗಬೇಕಿದೆ. ಕೆಲವೊಮ್ಮೆ ಭಾರತೀಯರಿಗೆ ಅಂಪೈರ್​ಗಳ ಕೆಟ್ಟ ತೀರ್ಪು ಹಿನ್ನಡೆ ತಂದರೆ, ಕೆಲ ಬಾರಿ ಅದೃಷ್ಟ ಕೈಕೊಟ್ಟಿತು.

ಒಟ್ಟಾರೆ ಪ್ಯಾರಿಸ್​ನಲ್ಲಿ ದಶ ಪದಕದ ಮೇಲೆ ಕಣ್ಣಿಟ್ಟಿದ್ದ ಭಾರತದ ಕ್ರೀಡಾಪ್ರೇಮಿಗಳ ಹೃದಯಭಗ್ನಗೊಂಡರೂ, ಅದೇ ಬೇಸರದಲ್ಲಿ ಉಳಿಯಬೇಕಾಗಿಲ್ಲ. ಈ ಸೋಲನ್ನೇ 4 ವರ್ಷಗಳ ಬಳಿಕ ಲಾಸ್​ ಏಂಜಲಿಸ್​ನಲ್ಲಿ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಅವಕಾಶ ಭಾರತದ ಮುಂದಿದೆ. ಮುಂದಿನ ಬಾರಿ ದಶ ಪದಕದ ಆಸೆ ಈಡೇರಿಸಿಕೊಳ್ಳುವ ಭರವಸೆಯ ಬೆಳಕು ಪ್ಯಾರಿಸ್​ನಲ್ಲಿ ಮೂಡಿದೆ.

ಭಾರತ 15 ಪದಕ ಗೆಲ್ಲಬಹುದಿತ್ತು!

ಪ್ಯಾರಿಸ್​ನಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಭಾರತ ಒಟ್ಟು 15 ಪದಕಗಳನ್ನು ಗೆಲ್ಲಬಹುದಾಗಿತ್ತು! ಈಗ 6 ಪದಕ ಬಂದಿದ್ದರೆ, 6 ಸ್ಪರ್ಧೆಗಳಲ್ಲಿ ಭಾರತ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರಿಂದ 6 ಪದಕಗಳು ತಪ್ಪಿದವು. ವಿನೇಶ್​ ಅನರ್ಹಗೊಳ್ಳದಿದ್ದರೆ ಭಾರತಕ್ಕೆ ಇನ್ನೊಂದು ಪದಕ ಖಾತ್ರಿ ಇತ್ತು. ಬಾಕ್ಸಿಂಗ್​ನಲ್ಲಿ ನಿಶಾಂತ್​ ದೇವ್​, ಲವ್ಲಿನಾ ಕಳಪೆ ಅಂಪೈರಿಂಗ್​ನಿಂದಾಗಿ ಕ್ವಾರ್ಟರ್​ೈನಲ್​ನಲ್ಲಿ ಸೋಲದೆ ಸೆಮಿೈನಲ್​ಗೇರಿದ್ದರೆ ಭಾರತಕ್ಕೆ ಮತ್ತೆರಡು ಪದಕ ಲಭಿಸುತ್ತಿದ್ದವು.

3 ಬಂಗಾರದ ಬೇಟೆ ಮಿಸ್​!

ಭಾರತಕ್ಕೆ ಕೆಲ ಅಡ್ಡಿ, ಹಿನ್ನಡೆಗಳು ಎದುರಾಗದಿದ್ದರೆ ಪ್ಯಾರಿಸ್​ನಲ್ಲಿ 3 ಚಿನ್ನವನ್ನೂ ಗೆಲ್ಲಬಹುದಾಗಿತ್ತು. ಟೋಕಿಯೊ ಗೇಮ್ಸ್​ ಸ್ವರ್ಣ ಸಾಧಕ ನೀರಜ್​ ಚೋಪ್ರಾ ಮೇಲೆ ಈ ಸಲವೂ ಅದೇ ನಿರೀಕ್ಷೆ ಇದ್ದರೂ, ಗಾಯದ ಭೀತಿಯಿಂದಾಗಿ ಅವರಿಗೆ ಪೂರ್ಣ ಸಾಮರ್ಥ್ಯದ ನಿರ್ವಹಣೆ ತೋರಿಸಲಾಗಲಿಲ್ಲ. ಜತೆಗೆ ಪಾಕಿಸ್ತಾನದ ಅರ್ಷದ್​ ನದೀಂ ಒಲಿಂಪಿಕ್ಸ್​ ದಾಖಲೆ ಬರೆದಿದ್ದರಿಂದ, ನೀರಜ್​ ಟೋಕಿಯೊಗಿಂತ (87.58 ಮೀ) ಉತ್ತಮ (89.45 ಮೀ) ನಿರ್ವಹಣೆ ತೋರಿದರೂ ಚಿನ್ನ ಸಿಗಲಿಲ್ಲ. ಫೈನಲ್​ ದಿನ ವಿನೇಶ್​ ಪೋಗಟ್​ 100 ಗ್ರಾಂ ಅಧಿಕ ತೂಕದಿಂದ ಅನರ್ಹಗೊಳ್ಳದಿದ್ದರೆ ಮತ್ತೊಂದು ಚಿನ್ನ ಗೆಲ್ಲಬಹುದಿತ್ತು. ಇನ್ನು ಹಾಕಿ ಕ್ವಾರ್ಟರ್​ಫೈನಲ್​ನಲ್ಲಿ ಕೆಟ್ಟ ಅಂಪೈರಿಂಗ್​ನಿಂದ ಅಮಿತ್​ ರೋಹಿದಾಸ್​ ಕೆಂಪು ಕಾರ್ಡ್​ ಪಡೆದು ಸೆಮಿಫೈನಲ್​ಗೂ ಅಲಭ್ಯರಾಗಿರದಿದ್ದರೆ, ಸೆಮಿಫೈನಲ್​ನಲ್ಲಿ ಜರ್ಮನಿ ಎದುರು ರಕ್ಷಣಾ ವಿಭಾಗದ ವೈಫಲ್ಯದಿಂದ ಸೋಲುತ್ತಿರಲಿಲ್ಲ ಮತ್ತು ಫೈನಲ್​ಗೇರಿ ಚಿನ್ನ ಗೆಲ್ಲುವ ಅವಕಾಶವಿರುತಿತ್ತು.

ಭಾರತಕ್ಕೆ 71ನೇ ಸ್ಥಾನ

ಪ್ಯಾರಿಸ್​ ಒಲಿಂಪಿಕ್ಸ್​ ಪದಕ ಪಟ್ಟಿಯಲ್ಲಿ ಭಾರತ 71ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದು ಕಳೆದ 24 ವರ್ಷಗಳಲ್ಲೇ ಭಾರತಕ್ಕೆ ಕಡಿಮೆ ಸ್ಥಾನ ಎನಿಸಿದೆ. ಈ ಮುನ್ನ 1996 ಮತ್ತು 2000ದ ಒಲಿಂಪಿಕ್ಸ್​ನಲ್ಲೂ ಭಾರತ 71ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರದ 5 ಒಲಿಂಪಿಕ್ಸ್​ಗಳಲ್ಲಿ ಭಾರತ ಕ್ರಮವಾಗಿ 65, 50, 55, 67, 48ನೇ ಸ್ಥಾನ ಗಳಿಸಿತ್ತು. ಈ ಬಾರಿ ಚಿನ್ನ ಅಥವಾ ಹೆಚ್ಚಿನ ಬೆಳ್ಳಿ ಪದಕ ಗೆಲ್ಲದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ವಿನೇಶ್​ಗೆ ಬೆಳ್ಳಿ ಸಿಕ್ಕರೆ ಭಾರತ ಪದಕಪಟ್ಟಿಯಲ್ಲಿ 68ನೇ ಸ್ಥಾನಕ್ಕೇರಲಿದೆ.

*ಕ್ರೀಡೆಯಲ್ಲಿ ಸಾಧನೆ ತೋರಲು ಅದು ನಿಮ್ಮ ದಿನವಾಗಿರಬೇಕು. ಸ್ವಲ್ಪ ಅದೃಷ್ಟವೂ ನಿಮ್ಮ ಜತೆಗಿರಬೇಕಾಗುತ್ತದೆ. ಅದು ನಿಮ್ಮ ದಿನವಾಗಿರದಿದ್ದರೆ ಹಾದಿ ಕಠಿಣವಾಗಿರುತ್ತದೆ. ಆಗ ಕಠಿಣ ತರಬೇತಿಯನ್ನು ಮುಂದುವರಿಸಿ ಬಲಿಷ್ಠವಾಗಿ ಮರಳುವುದಷ್ಟೇ ಉಳಿದ ಆಯ್ಕೆಯಾಗಿರುತ್ತದೆ.

| ನೀರಜ್​ ಚೋಪ್ರಾ

ಪದಕ ಸಾಧಕರು:

ನೀರಜ್​ ಚೋಪ್ರಾ (ಜಾವೆಲಿನ್​): 1 ಬೆಳ್ಳಿ

ಮನು ಭಾಕರ್​ (ಶೂಟಿಂಗ್​): 2 ಕಂಚು

ಸರಬ್ಜೋತ್​ ಸಿಂಗ್​ (ಶೂಟಿಂಗ್​): 1 ಕಂಚು

ಸ್ವಪ್ನಿಲ್​ ಕುಸಾಲೆ (ಶೂಟಿಂಗ್​): 1 ಕಂಚು

ಪುರುಷರ ಹಾಕಿ ತಂಡ: 1 ಕಂಚು

ಅಮನ್​ ಸೆಹ್ರಾವತ್​ (ಕುಸ್ತಿ): 1 ಕಂಚು

ಪದಕದ ಸನಿಹ ನಿರಾಸೆ

*ಅರ್ಜುನ್​ ಬಬುತಾ (ಶೂಟಿಂಗ್​)

*ಧೀರಜ್​ ಬಿ-ಅಂಕಿತಾ (ಆರ್ಚರಿ)

*ಲಕ್ಷ$್ಯ ಸೇನ್​ (ಬ್ಯಾಡ್ಮಿಂಟನ್​)

*ಅನಂತ್​ಜೀತ್​-ಮಹೇಶ್ವರಿ (ಶೂಟಿಂಗ್​)

*ಮೀರಾಬಾಯಿ ಚಾನು (ವೇಯ್ಟ್​ಲಿಫ್ಟಿಂಗ್​)

*ನಿಶಾಂತ್​ ದೇವ್​ (ಬಾಕ್ಸಿಂಗ್​)

*ಲವ್ಲಿನಾ ಬೋರ್ಗೋಹೈನ್​ (ಬಾಕ್ಸಿಂಗ್​)

*ವಿನೇಶ್​ ಪೋಗಟ್​ (ಕುಸ್ತಿ)

ಪದಕ ಗೆಲ್ಲದಿದ್ದರೂ ಮಿಂಚಿದವರು

*ಅವಿನಾಶ್​ ಸಾಬ್ಲೆ (ಸ್ಟೀಪಲ್​ಚೇಸ್​)

*ಬಾಲರಾಜ್​ ಪನ್ವರ್​ (ಸೈಲಿಂಗ್​)

*ರಮಿತಾ ಜಿಂದಾಲ್​ (ಶೂಟಿಂಗ್​)

*ಮನಿಕಾ ಬಾತ್ರಾ (ಟೇಬಲ್​ ಟೆನಿಸ್​)

*ಶ್ರೀಜಾ ಅಕುಲ (ಟೇಬಲ್​ ಟೆನಿಸ್​)

*ಅರ್ಚನಾ ಕಾಮತ್​ (ಟೇಬಲ್​ ಟೆನಿಸ್​)

*ನಿಶಾ ದಹಿಯಾ (ಕುಸ್ತಿ)

ನಿರೀಕ್ಷೆ ಹುಸಿಗೊಳಿಸಿದವರು

*ಚಿರಾಗ್​ ಶೆಟ್ಟಿ-ಸಾತ್ವಿಕ್​ (ಬ್ಯಾಡ್ಮಿಂಟನ್​)

*ಪಿವಿ ಸಿಂಧು (ಬ್ಯಾಡ್ಮಿಂಟನ್​)

*ರೋಹನ್​ ಬೋಪಣ್ಣ (ಟೆನಿಸ್​)

*ದೀಪಿಕಾ ಕುಮಾರಿ (ಆರ್ಚರಿ)

*ಅಂತಿಮ್​ ಪಾಂಗಲ್​ (ಕುಸ್ತಿ)

*ಐಶ್ವರಿ ಪ್ರತಾಪ್​ (ಶೂಟಿಂಗ್​)

*ಅದಿತಿ ಅಶೋಕ್​ (ಗಾಲ್ಫ್​)

*ನಿಖತ್​ ಜರೀನ್​ (ಬಾಕ್ಸಿಂಗ್​)

*ಜ್ಯೋತಿ ಯರಾಜಿ (ಹರ್ಡಲ್ಸ್​)

ಪ್ಯಾರಿಸ್​ನಲ್ಲಿ ಭಾರತದ ಪ್ರಥಮಗಳು

*ಮಹಿಳಾ ಶೂಟರ್​ಗೆ ಪದಕ (ಮನು ಭಾಕರ್​)

*ಓರ್ವ ಕ್ರೀಡಾಪಟುವಿಗೆ 2 ಪದಕ (ಮನು ಭಾಕರ್​)

*ಮಿಶ್ರ ವಿಭಾಗದಲ್ಲಿ ಪದಕ ಸಾಧನೆ (ಶೂಟಿಂಗ್​)

*ಒಂದೇ ಕ್ರೀಡೆಯಲ್ಲಿ 3 ಪದಕ (ಶೂಟಿಂಗ್​)

*50 ಮೀ. ರೈಫಲ್​ನಲ್ಲಿ ಪದಕ (ಕುಸಾಲೆ)

*ವೈಯಕ್ತಿಕ ಚಿನ್ನ, ಬೆಳ್ಳಿ ಪದಕ (ನೀರಜ್​ ಚೋಪ್ರಾ)

*ಐದು ಕಂಚಿನ ಪದಕ ಗೆಲುವು

*5: ಭಾರತ ಸತತ 5ನೇ ಬಾರಿ ಒಲಿಂಪಿಕ್ಸ್​ ಕುಸ್ತಿಯಲ್ಲಿ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು.

*12: ಬ್ಯಾಡ್ಮಿಂಟನ್​ನಲ್ಲಿ 12 ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಪದಕವಿಲ್ಲ.

*52: ಭಾರತ ಹಾಕಿಯಲ್ಲಿ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್​ಗಳಲ್ಲಿ ಪದಕ ಜಯಿಸಿತು.

*4: ಮನು ಭಾಕರ್​ ಮತ್ತು ನೀರಜ್​ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಅವಳಿ ವೈಯಕ್ತಿಕ ಪದಕ ಗೆದ್ದ ಭಾರತದ 3 ಮತ್ತು 4ನೇ ಕ್ರೀಡಾಪಟು ಎನಿಸಿದರು.

*12: ಭಾರತದ ಶೂಟರ್​ಗಳು ಸತತ 2 ಒಲಿಂಪಿಕ್ಸ್​ಗಳ ಬಳಿಕ ಅಂದರೆ 12 ವರ್ಷಗಳ ಬಳಿಕ ಪದಕ ಗೆಲುವು ಸಾಧಿಸಿದರು.