ಕ್ರೀಡೆ

IND-W vs IRE-W: ಭಾರತ ಮಹಿಳೆಯರಿಗೆ ದಾಖಲೆಯ ಜಯ: ಹಲವು ದಾಖಲೆ ಬರೆದ ಸ್ಮತಿ, ಪ್ರತೀಕಾ ರಾವಲ್

ರಾಜ್‌ಕೋಟ್: ಆರಂಭಿಕ ಬ್ಯಾಟುಗಾರ್ತಿ ಪ್ರತೀಕಾ ರಾವಲ್ (154 ರನ್, 129 ಎಸೆತ, 20 ಬೌಂಡರಿ, 1 ಸಿಕ್ಸರ್) ಚೊಚ್ಚಲ ಶತಕ ಹಾಗೂ ನಾಯಕಿ ಸ್ಮತಿ ಮಂದನಾ (135 ರನ್, 80 ಎಸೆತ, 12 ಬೌಂಡರಿ, 7 ಸಿಕ್ಸರ್) ಸಿಡಿಸಿದ 10ನೇ ಸೆಂಚುರಿ ನೆರವಿನಿಂದ ರನ್‌ಹೊಳೆ ಹರಿಸಿದ ಭಾರತ ತಂಡ ಮಹಿಳಾ ಏಕದಿನ ಸರಣಿಯ 3ನೇ ಹಾಗೂ ಕೊನೇ ಪಂದ್ಯದಲ್ಲಿ ಐರ್ಲೆಂಡ್ ಎದುರು 304 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಸರಣಿಯಲ್ಲಿ ಸ್ಮತಿ ಮಂದನಾ ಪಡೆ 3-0 ಕ್ಲೀನ್‌ಸ್ವೀಪ್ ಸಾಧಿಸಿದೆ.

ನಿರಂಜನ್ ಷಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಪ್ರತೀಕಾ- ಸ್ಮತಿ ಜೋಡಿ 160 ಎಸೆತಗಳಲ್ಲಿ 233 ರನ್ ಜತೆಯಾಟವಾಡಿ ಒದಗಿಸಿದ ಭರ್ಜರಿ ಆರಂಭ ಹಾಗೂ ರಿಚಾ ೋಷ್ (59) ಅರ್ಧಶತಕದ ಬಲದಿಂದ ಭಾರತ 5 ವಿಕೆಟ್‌ಗೆ 435 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ದೀಪ್ತಿ ಶರ್ಮ (27ಕ್ಕೆ 3) ಮತ್ತು ಇತರ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಐರ್ಲೆಂಡ್ 31.4 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು. ಇದು ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಬೃಹತ್ ರನ್ ಅಂತರದ ಗೆಲುವಾಗಿದೆ.

ಭಾರತ: 5 ವಿಕೆಟ್‌ಗೆ 435 (ಪ್ರತೀಕಾ 154, ಸ್ಮತಿ 135, ರಿಚಾ 59, ತೇಜಲ್ 28, ಹರ್ಲೀನ್ 15, ಜೆಮೀಮಾ 4*, ದೀಪ್ತಿ ಶರ್ಮ 11*, ಓರ್ಲಾ 71ಕ್ಕೆ 2). ಐರ್ಲೆಂಡ್: 31.4 ಓವರ್‌ಗಳಲ್ಲಿ 131 (ಸಾರಾ 41, ಗೇಬಿ 1, ಓರ್ಲಾ 36, ಲೌರಾ 10, ಲೇಹ್ 15, ಆರ್ಲಿನ್ 2, ದೀಪ್ತಿ ಶರ್ಮ 27ಕ್ಕೆ 3, ತನುಜಾ 31ಕ್ಕೆ 2). ಪಂದ್ಯಶ್ರೇಷ್ಠ-ಸರಣಿ ಶ್ರೇಷ್ಠ: ಪ್ರತೀಕಾ ರಾವಲ್ (ಒಟ್ಟು 310 ರನ್).

400+ ರನ್ ಗಳಿಸಿದ 3ನೇ ತಂಡ

ಭಾರತ ತಂಡ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ ಮೂರನೇ ತಂಡ ಎನಿಸಿತು. ಜತೆಗೆ ಮಹಿಳಾ ಕ್ರಿಕೆಟ್‌ನಲ್ಲಿ ದಾಖಲಾದ 4ನೇ ಗರಿಷ್ಠ ಮೊತ್ತ ಇದಾಗಿದೆ. ನ್ಯೂಜಿಲೆಂಡ್ ತಂಡ 491, 455, 440 ರನ್‌ಗಳಿಸಿ ಗರಿಷ್ಠ ರನ್ ಕಲೆಹಾಕಿದ ಪಟ್ಟಿಯಲ್ಲಿ ಅಗ್ರ 3 ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 400 ಪ್ಲಸ್ ಕಲೆಹಾಕಿರುವ ಮತ್ತೊಂದು ತಂಡವಾಗಿದೆ.

ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಮೊತ್ತವನ್ನು ಉತ್ತಮ ಪಡಿಸಿಕೊಳ್ಳುವ ಮೂಲಕ ಕಳೆದ ಭಾನುವಾರ ಐರ್ಲೆಂಡ್ ವಿರುದ್ಧವೇ ಕಲೆಹಾಕಿದ ಗರಿಷ್ಠ 370 ರನ್‌ಗಳ ದಾಖಲೆ ಮುರಿಯಿತು. ಜತೆಗೆ ಪಂದ್ಯವೊಂದರಲ್ಲಿ ಮೂರನೇ ಗರಿಷ್ಠ ಬೌಂಡರಿ ಹಾಗೂ ಸಿಕ್ಸರ್ (57) ಸಿಡಿಸಿದ ತಂಡ ಎನಿಸಿತು.

ಹಲವು ದಾಖಲೆ ಬರೆದ ಸ್ಮತಿ

ಏಕದಿನ ಕ್ರಿಕೆಟ್‌ನಲ್ಲಿ 10ನೇ ಶತಕ ಬಾರಿಸುವ ಮೂಲಕ ಸ್ಮತಿ ಮಂದನಾ ಹಲವು ದಾಖಲೆ ರಚಿಸಿದರು. 70 ಎಸೆತಗಳಲ್ಲಿ ಶತಕ ಬಾರಿಸಿದ ಸ್ಮತಿ ಭಾರತ ಪರ ವೇಗದ ಸೆಂಚುರಿ ಗಳಿಸಿದ ಹರ್ಮಾನ್‌ಪ್ರೀತ್ ದಾಖಲೆಯನ್ನು (87 ಎಸೆತ) ಅಳಿಸಿಹಾಕಿದರು. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (15), ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ (13) ಮೊದಲೆರಡು ಸ್ಥಾನದಲ್ಲಿದ್ದಾರೆ. 7 ಸಿಕ್ಸರ್ ಬಾರಿಸಿದ ಸ್ಮತಿ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಹರ್ಮಾನ್‌ಪ್ರೀತ್ ಸಾಧನೆಯನ್ನು ಸರಿಗಟ್ಟಿದರು. ಜತೆಗೆ 10 ಶತಕ ಬಾರಿಸಿದ ಏಷ್ಯಾದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದರು.

3: ಭಾರತ ಇಬ್ಬರೂ ಆರಂಭಿಕರು ಶತಕ ಸಿಡಿಸಿದ 3ನೇ ದೃಷ್ಟಾಂತ ಇದಾಗಿದೆ. ಮಿಥಾಲಿ ರಾಜ್-ರೇಷ್ಮಾ ಗಾಂಧಿ (1999), ದೀಪ್ತಿ ಶರ್ಮ-ಪೂನಂ ರಾವತ್ (2017) ಹಿಂದಿನ ಸಾಧಕರು.

3: ಪ್ರತೀಕಾ ರಾವಲ್ ಏಕದಿನದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ ಮೂರನೇ ಭಾರತೀಯ ಬ್ಯಾಟುಗಾರ್ತಿ. ದೀಪ್ತಿ ಶರ್ಮ (188), ಹರ್ಮಾನ್‌ಪ್ರೀತ್ ಕೌರ್ (171*) ಮೊದಲಿಗರು.

304: ಭಾರತ ತಂಡ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಗರಿಷ್ಠ ರನ್ ಅಂತರದ ಗೆಲುವು ಇದಾಗಿದೆ. ಐರ್ಲೆಂಡ್ ವಿರುದ್ಧವೇ 249 ರನ್ ಜಯ ಹಿಂದಿನ ಗರಿಷ್ಠ.

435: ಪುರುಷರು ಹಾಗೂ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಗರಿಷ್ಠ ಮೊತ್ತ ಇದಾಗಿದೆ. ಭಾರತ ಪುರುಷರ ತಂಡ 418 ರನ್ ಪೇರಿಸಿರುವುದು ಗರಿಷ್ಠವಾಗಿದೆ.