ಕ್ರೀಡೆ

ಐರ್ಲೆಂಡ್ ಎದುರು ಟಿ20 ಸರಣಿ ಗೆದ್ದ ಭಾರತ: ಮಿಂಚಿದ ಋತುರಾಜ್, ರಿಂಕು ಸಿಂಗ್

ಡಬ್ಲಿನ್: ಸರ್ವಾಂಗೀಣ ನಿರ್ವಹಣೆ ತೋರಿದ ಪ್ರವಾಸಿ ಭಾರತ ತಂಡ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ಎದುರು 33 ರನ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ ಜಸ್‌ಪ್ರೀತ್ ಬುಮ್ರಾ ಸಾರಥ್ಯದ ಯುವ ಪಡೆ ಮೂರು ಪಂದ್ಯಗಳ ಸರಣಿಯನ್ನು 2-0ರಿಂದ ವಶಪಡಿಸಿಕೊಂಡಿದೆ.

ಮಲಾಹೈಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭಿಕ ಆಘಾತದ ಬಳಿಕ ಋತುರಾಜ್ ಗಾಯಕ್ವಾಡ್ (58 ರನ್, 43 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ವಿಕೆಟ್ ಕೀಪರ್- ಬ್ಯಾಟರ್ ಸಂಜು ಸ್ಯಾಮ್ಸನ್ (40) ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 185 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪ್ರಸಿದ್ಧ ಕೃಷ್ಣ (29ಕ್ಕೆ2), ಜಸ್‌ಪ್ರೀತ್ ಬುಮ್ರಾ (15ಕ್ಕೆ2) ದಾಳಿಗೆ ಕುಸಿದ ಐರ್ಲೆಂಡ್ 8 ವಿಕೆಟ್‌ಗೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಆಂಡ್ರಿ ಬಲ್ಬಿರ್ನಿ (72 ರನ್, 51 ಎಸೆತ, 5 ಬೌಂಡರಿ, 4 ಸಿಕ್ಸರ್) ಹೋರಾಟ ವ್ಯರ್ಥವಾಯಿತು.

ಪ್ರಸಿದ್ಧ-ಬಿಷ್ಣೋಯಿ ಕಡಿವಾಣ: ಸವಾಲಿನ ಮೊತ್ತದ ಚೇಸಿಂಗ್ ನಡೆಸಿದ ಐರ್ಲೆಂಡ್‌ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ (37ಕ್ಕೆ 2) ಆರಂಭಿಕ ಕಡಿವಾಣ ಹೇರಿದರು. ಮೂರನೇ ಓವರ್‌ನಲ್ಲಿ ದಾಳಿಗಿಳಿದ ಪ್ರಸಿದ್ಧ, ನಾಯಕ ಪೌಲ್ ಸ್ಟಿರ್ಲಿಂಗ್ (0), ಹಾಗೂ ಲೋರ್ಕನ್ ಟಕರ್‌ಗೆ ಡಗೌಟ್ ದಾರಿ ತೋರಿದರು. ಬಳಿಕ ಹ್ಯಾರಿ ಟೆಕ್ಟರ್ (7) ಹಾಗೂ ಕರ್ಟಿಸ್ ಕ್ಯಾಂಪರ್ (18) ತುಸು ಚೇತರಿಕೆ ನೀಡಿದರು. 63 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಐರ್ಲೆಂಡ್ ಪರ ಆರಂಭಿಕ ಆಂಡ್ರಿ ಬಲ್ಬಿರ್ನಿ ಅರ್ಧಶತಕ ಮೂಲಕ ಏಕಾಂಗಿ ಹೋರಾಟ ನಡೆಸಿದರು. 5 ವಿಕೆಟ್‌ಗೆ ಜಾರ್ಜ್ ಡಾಕ್ರೆಲ್ (13) ಜತೆಗೂಡಿ 52 ರನ್ ಪೇರಿಸಿ ಪ್ರತಿರೋಧ ತೋರಿದರು. 39 ಎಸೆತದಲ್ಲಿ ಅರ್ಧಶತಕ ಪೂರೈಸಿದ ಬಲ್ಬಿರ್ನಿ, ಅರ್ಷದೀಪ್‌ಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಮಾರ್ಕ್ ಅಡೇರ್ (23) ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ನಿರಾಸೆ ಮೂಡಿಸಿದ ಜೈಸ್ವಾಲ್-ತಿಲಕ್: ವಿಂಡೀಸ್ ಪ್ರವಾಸದಲ್ಲಿ ಭರವಸೆ ಮೂಡಿಸಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್ (18) ಹಾಗೂ ತಿಲಕ್ ವರ್ಮ (1) ಐರ್ಲೆಂಡ್‌ನಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಋತುರಾಜ್ ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ಇವರಿಬ್ಬರು ಮೂರನೇ ವಿಕೆಟ್‌ಗೆ 49 ಎಸೆತಗಳಲ್ಲಿ 71 ರನ್ ಪೇರಿಸಿದರು. ಋತುರಾಜ್ 39 ಎಸೆತಗಳಲ್ಲಿ ಟೀಮ್ ಇಂಡಿಯಾ ಪರ ಎರಡನೇ ಅರ್ಧಶತಕ ಬಾರಿಸಿದರು. 4ನೇ ವಿಕೆಟ್‌ಗೆ ಋತುರಾಜ್ ಜತೆಯಾದ ರಿಂಕು ಸಿಂಗ್ (34 ರನ್, 21 ಎಸೆತ, 2 ಬೌಂಡರಿ, 3 ಸಿಕ್ಸರ್) ಮೂಲಕ 24 ರನ್‌ಗಳ ಉಪಯುಕ್ತ ರನ್ ಕೊಡುಗೆ ನೀಡಿದರು.

ರಿಂಕು-ದುಬೆ ಫಿನಿಷಿಂಗ್ ಟಚ್: ಋತುರಾಜ್ ಡಗೌಟ್‌ಗೆ ಮರಳಿದ ಬಳಿಕ ಜತೆಯಾದ ಐಪಿಎಲ್ ಪ್ರತಿಭೆಗಳಾದ ರಿಂಕು ಸಿಂಗ್ ಹಾಗೂ ಶಿವಂ ದುಬೆ (22) ಸ್ಲಾಗ್ ಓವರ್‌ಗಳಲ್ಲಿ ತಂಡದ ಮೊತ್ತ ಏರಿಸಿದರು. ಇವರಿಬ್ಬರೂ ಐದನೇ ವಿಕೆಟ್‌ಗೆ 28 ಎಸೆತಗಳಲ್ಲಿ 55 ರನ್ ಕಲೆಹಾಕಿದರು. ಅಂತಿಮ 2 ಓವರ್‌ಗಳಲ್ಲಿ ರಿಂಕು ಸಿಂಗ್ 3, ದುಬೆ 2 ಸಿಕ್ಸರ್ ಸಿಡಿಸಿ ಮೊತ್ತವನ್ನು 185ಕ್ಕೇರಿಸಿದರು. ಕೊನೇ ಐದು ಓವರ್‌ಗಳಲ್ಲಿ ಭಾರತ 56 ರನ್ ಸೂರೆಗೈದಿತು.