ಮೊಹಾಲಿ: ಅನುಭವಿ ವೇಗಿ ಮೊಹಮದ್ ಶಮಿ (51ಕ್ಕೆ 5) ಮಾರಕ ಬೌಲಿಂಗ್ ದಾಳಿ ಹಾಗೂ ಯುವ ಬ್ಯಾಟರ್‌ಗಳಾದ ಶುಭಮಾನ್ ಗಿಲ್ (74 ರನ್, 63 ಎಸೆತ, 6ಬೌಂಡರಿ, 2 ಸಿಕ್ಸರ್) ಹಾಗೂ ಋತುರಾಜ್ ಗಾಯಕ್ವಾಡ್ (71 ರನ್, 77 ಎಸೆತ, 10 ಬೌಂಡರಿ) ಒದಗಿಸಿದ ಉತ್ತಮ ಆರಂಭದ ಬಲದಿಂದ ಆತಿಥೇಯ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳಿಂದ ಶುಭಾರಂಭ ಕಂಡಿದೆ. ಇದರೊಂದಿಗೆ ಹಂಗಾಮಿ ನಾಯಕ ಕೆಎಲ್ ರಾಹುಲ್ ಬಳಗ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ 116 ಅಂಕ ಕಲೆಹಾಕಿದ ಭಾರತ ಅಗ್ರಸ್ಥಾನಕ್ಕೇರಿದ್ದು, ಇದರೊಂದಿಗೆ ಏಕಕಾಲದಲ್ಲಿ ಎಲ್ಲ ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ತಂಡ ಎನಿಸಿದೆ.
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಡೇವಿಡ್ ವಾರ್ನರ್ (52 ರನ್, 53 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 35.4 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್‌ಗಳಿಸಿದಾಗ ಮಳೆಯಿಂದಾಗಿ 20 ನಿಮಿಷ ಆಟ ಸ್ಥಗಿತಗೊಂಡಿತು. ನಂತರ ಓವರ್ ಕಡಿತವಿಲ್ಲದೆ ಪಂದ್ಯ ಮುಂದುವರಿದಾಗ ಆಸೀಸ್ ಭರ್ತಿ 50 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಗಿಲ್ -ಗಾಯಕ್ವಾಡ್ ಉತ್ತಮ ಅಡಿಪಾಯ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ (58* ರನ್, 63 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (50 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಸಮಯೋಚಿತ ಜತೆಯಾಟದ ಬಲದಿಂದ 48.4 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.