ಢಾಕಾ: ಭಾರತ ತಂಡ ಸತತ ಮೂರನೇ ಮತ್ತು ಒಟ್ಟಾರೆ 10ನೇ ಬಾರಿ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬ್ಲೂ ಟೈಗರ್ಸ್ ಖ್ಯಾತಿಯ ಭಾರತ ತಂಡ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಭಾರತ 0-1ರಿಂದ ಹಿನ್ನಡೆ ಅನುಭವಿಸಿತ್ತು. ಪಾಕಿಸ್ತಾನ ಮೊದಲಾರ್ಧದ ಇಂಜುರಿ ಸಮಯದಲ್ಲಿ ಅಲಂಗಿರ್ ಘಾಜಿ (45+1ನೇ ನಿಮಿಷ) ಸಿಡಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತ್ತು. 59ನೇ ನಿಮಿಷದಲ್ಲಿ ಜುನೈದ್ ಶಾ ರೆಡ್ ಕಾರ್ಡ್ ಪಡೆದ ಕಾರಣ ಪಾಕ್ ಆಟಗಾರರ ಸಂಖ್ಯೆ 10ಕ್ಕೆ ಇಳಿಯಿತು. ಬಳಿಕ ಭಾರತ ಇದರ ಸಂಪೂರ್ಣ ಲಾಭವೆತ್ತಿತು. 60ನೇ ನಿಮಿಷದಲ್ಲಿ ಸುಹೈಲ್ ಬಟ್ ಸಿಡಿಸಿದ ಗೋಲಿನಿಂದ ಭಾರತ ಸಮಬಲ ಸಾಧಿಸಿತು. ನಂತರ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವ ಲಕ್ಷಣ ಕಾಣಿಸಿದಾಗ 88ನೇ ನಿಮಿಷದಲ್ಲಿ ಸಂದೀಪ್ ಮಂಡಿ ಭಾರತಕ್ಕೆ ಗೆಲುವಿನ ಗೋಲು ತಂದುಕೊಟ್ಟರು. ಭಾರತ ಈ ಮುನ್ನ ಲೀಗ್ ಹಂತದಲ್ಲೂ 3-2ರಿಂದ ಪಾಕಿಸ್ತಾನಕ್ಕೆ ಸೋಲುಣಿಸಿತ್ತು.
ಭಾರತ ತಂಡ ಈ ಹಿಂದೆ 1993, 1997, 1999, 2005, 2009, 2011, 2015, 2021, 2023ರಲ್ಲಿ ಪ್ರಶಸ್ತಿ ಜಯಿಸಿತ್ತು. ಪ್ರಧಾನ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದರಿಂದ ಭಾರತ ಈ ಬಾರಿ ಟೂರ್ನಿಯಲ್ಲಿ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಿದ ನಡುವೆಯೂ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ವಿಶೇಷ.