ಕ್ರೀಡೆ

ಧೋನಿ ಸ್ಟೈಲ್​ನಲ್ಲಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಕೇದಾರ್​ ಜಾಧವ್!

ಪುಣೆ: ಭಾರತ ಮತ್ತು ಮಹಾರಾಷ್ಟ್ರ ತಂಡದ ಬ್ಯಾಟರ್​ ಕೇದಾರ್​ ಜಾಧವ್​ ಎಲ್ಲ ಮಾದರಿಯ ಕ್ರಿಕೆಟ್​ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ. ಟೀಮ್​ ಇಂಡಿಯಾ ಪರ ಕೊನೇ ಪಂದ್ಯ ಆಡಿದ 4 ವರ್ಷಗಳ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

39 ವರ್ಷದ ಕೇದಾರ್​ 2014ರ ನವೆಂಬರ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ 73 ಏಕದಿನ ಪಂದ್ಯಗಳಲ್ಲಿ 2 ಶತಕ, 6 ಅರ್ಧಶತಕಗಳ ಸಹಿತ 1,389 ರನ್​ ಬಾರಿಸಿದ್ದಾರೆ ಮತ್ತು 9 ಟಿ20 ಪಂದ್ಯಗಳಲ್ಲಿ 122 ರನ್​ ಗಳಿಸಿದ್ದಾರೆ. ಎಂಎಸ್​ ಧೋನಿ ಸ್ಟೆ$ಲ್​ನಲ್ಲೇ ಕೇದಾರ್​ ಎಕ್ಸ್​ನಲ್ಲಿ ವಿದಾಯ ನಿರ್ಧಾರವನ್ನು ಪ್ರಕಟಿಸಿರುವುದು ವಿಶೇಷವಾಗಿದೆ.

"ನನ್ನ ವೃತ್ತೀಜಿವನದುದ್ದಕ್ಕೂ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. 15.00 ಗಂಟೆಯಿಂದ (ಮಧ್ಯಾಹ್ನ 3) ಎಲ್ಲ ಮಾದರಿಯ ಕ್ರಿಕೆಟ್​ಗೆ ನನ್ನ ನಿವೃತ್ತಿ ಎಂದು ಪರಿಗಣಿಸಿ' ಎಂದು ಕೇದಾರ್​ ಬರೆದಿದ್ದಾರೆ. 2020ರ ಆಗಸ್ಟ್​ 15ರಂದು ಧೋನಿ ಕೂಡ ಇದೇ ರೀತಿಯಲ್ಲಿ, "19.29 ಗಂಟೆಯಿಂದ (ರಾತ್ರಿ 7.29) ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ' ಎಂದು ವಿದಾಯ ಸಾರಿದ್ದರು.

2017ರಲ್ಲಿ ತವರೂರು ಪುಣೆಯಲ್ಲಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದಲ್ಲಿ 76 ಎಸೆತಗಳಲ್ಲಿ 120 ರನ್​ (12 ಬೌಂಡರಿ, 4 ಸಿಕ್ಸರ್​) ಸಿಡಿಸಿ ಭಾರತಕ್ಕೆ 3 ವಿಕೆಟ್​ ಜಯ ತಂದಿದ್ದು ಕೇದಾರ್​ ವೃತ್ತೀಜಿವನದ ಪ್ರಮುಖ ಇನಿಂಗ್ಸ್​ ಆಗಿದೆ. ಅರೆಕಾಲಿಕ ಆ್​ ಸ್ಪಿನ್ನರ್​ ಆಗಿಯೂ ಗಮನಸೆಳೆದಿದ್ದ ಕೇದಾರ್​ ಏಕದಿನ ಕ್ರಿಕೆಟ್​ನಲ್ಲಿ 27 ವಿಕೆಟ್​ ಕೂಡ ಕಬಳಿಸಿದ್ದಾರೆ. ಕೇದಾರ್​ ಐಪಿಎಲ್​ನಲ್ಲಿ ಸಿಎಸ್​ಕೆ, ಡೆಲ್ಲಿ, ಕೊಚ್ಚಿ ಟಸ್ಕರ್ಸ್​, ಆರ್​ಸಿಬಿ ಮತ್ತು ಸನ್​ರೈಸರ್ಸ್​ ತಂಡಗಳ ಪರ ಆಡಿದ್ದಾರೆ.