ನವದೆಹಲಿ: ರಾಹುಲ್ ದ್ರಾವಿಡ್ (Rahul Dravid) ಬಳಿಕ ಟೀಮ್ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಅಧಿಕಾರ ವಹಿಸಿಕೊಂಡಿದ್ದು, ಇವರು ರಾಷ್ಟ್ರೀಯ ಕೋಚ್ ಆಗಿ ಬಡ್ತಿ ಪಡೆದ ಬಳಿಕ ಭಾರತ ತಂಡಕ್ಕೆ ಸಿಹಿಗಿಂತ ಹೆಚ್ಚಾಗಿ ಕಹಿಯೇ ಲಭಿಸಿದೆ. ಗೌತಮ್ ಗಂಭೀರ್ (Gautam Gambhir) ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ವಾಷ್ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದಾದ ಬಳಿಕ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಗೆದ್ದು ಬೀಗಿತ್ತಾದರು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ವಾಷ್ ಆಗುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿ ಬೇಡದ ದಾಖಲೆಗಳಿಗೆ ಕೊರಳೊಡ್ಡಿತ್ತು. ಇದೀಗ ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಮೇಲೆ ಎಲ್ಲರು ಕಣ್ಣು ನೆಟ್ಟಿದ್ದು, ಈ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸಾಮಾನ್ಯವಾಗಿ ನಾವು ನೋಡಿರುಚಂತೆ ಯಾವುದಾದರು ಅಂತಾರಾಷ್ಟ್ರೀಯ ಟೂರ್ನಿ ಅಥವಾ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವರುಗಳು ನೀಡುವ ವ್ಯಕ್ತಿರಿಕ್ತ ಹೇಳಕೆಗಳು ಉಭಯ ದೇಶಗಳ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿಸುತ್ತದೆ. ಇದೀಗ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಕುರಿತಂತೆ ಟೀಮ್ ಇಂಡಿಯಾ ಸಹಾಯಕ ಕೋಚ್ ಅಭಿಷೇಕ್ ನಾಯರ್ (Abhishek Nayar) ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಜಯಿಸುವುದು ಕಠಿಣ ಸವಾಲುಗಳಲ್ಲಿ ಒಂದಾಗಿದ್ದು, ಸರಣಿಗೆ ತಯಾರಿ ನಡೆಸುವ ಮೊದಲು ಗೌತಮ್ ಗಂಭೀರ್ ಆಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿರುವ ಕೆಲವು ಆಟಗಾರರು ಹಿರಿಯರ ಜೊತೆ ಪದಾರ್ಪಣೆ ಮಾಡಿದ್ದಾರೆ. ತಂಡದಲ್ಲಿ ಹಿರಿಯ ಆಟಗಾರರ ಜೊತೆ ಯುವ ಆಟಗಾರರು ಕೂಡ ಸ್ಥಾನ ಪಡೆದಿದ್ದು, ನಿಜವಾಗಿಯೂ ಉತ್ಸುಕರಾಗಿದ್ದಾರೆ ಮತ್ತು ಈ ಪ್ರವಾಸದ ಅಂತ್ಯದ ವೇಳೆಗೆ ತಮ್ಮ ಪ್ರದರ್ಶನದ ಮೂಲಕ ಹೆಸರು ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅಬಿಷೇಕ್ ನಾಯರ್ (Abhishek Nayar) ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಇನ್ನು ಬಾರ್ಡರ್-ಗವಾಸ್ಕರ್ ಟ್ರೋಪಿಯಲ್ಲಿ (Border-Gavaskar Trophy) ಭಾರತವು ಆಸ್ಟ್ರೇಲಿಯಾದ ವಿರುದ್ಧ ಮೇಲುಗೈ ಸಾಧಿಸಿದ್ದು, ಆಸ್ಟ್ರೇಲಿಯಾದ ನೆಲದಲ್ಲಿ ಸತತವಾಗಿ ಸರಣಿಯನ್ನು ವಶಪಡಿಸಿಕೊಂಡಿದೆ. ಬಾರ್ಡರ್-ಗವಾಸ್ಕರ್ ಟ್ರೋಪಿಯಲ್ಲಿ (Border-Gavaskar Trophy) ಭಾರತ 10 ಬಾರಿ ಜಯಿಸಿದರೆ. ಆಸ್ಟ್ರೇಲಿಯಾ ಐದು ಬಾರಿ ಗೆದ್ದಿದೆ. 2004-05 ಹಾಗೂ 2014-15ರಲ್ಲಿ ಆಸ್ಟ್ರೇಲಿಯಾ ಕೊನೆಯದಾಗಿ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.