ಕ್ರೀಡೆ

ಭಾರತಕ್ಕೆ ಕೈತಪ್ಪಿದ ದಾಖಲೆಯ ಸತತ 13ನೇ ಜಯ ; ದಕ್ಷಿಣ ಆಫ್ರಿಕಾ ಎದುರು 7 ವಿಕೆಟ್ ಸೋಲು

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸೀ ವಾನ್ ಡರ್ ಡುಸೆನ್ (75*ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (64*ರನ್, 31ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 7 ವಿಕೆಟ್‌ಗಳಿಂದ ಶರಣಾಯಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಸತತ 13ನೇ ಜಯದ ನಿರೀಕ್ಷೆಯಲ್ಲಿದ್ದ ಭಾರತ ನಿರಾಸೆ ಅನುಭವಿಸಿತು. 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ಪ್ರವಾಸಿ ತಂಡ 1-0 ಮುನ್ನಡೆ ಸಾಧಿಸಿತು. ಪ್ರಮುಖರ ಅನುಪಸ್ಥಿತಿಯಲ್ಲೂ ರಿಷಭ್ ಪಂತ್ ಪಡೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರೂ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳಲು ಬೌಲಿಂಗ್ ವಿಭಾಗ ವಿಫಲವಾಯಿತು.

ಅರುಣ್ ಜೇಟ್ಲೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಇಶಾನ್ ಕಿಶನ್ (76 ರನ್, 48 ಎಸೆತ, 11 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 211 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ದ.ಆಫ್ರಿಕಾ ತಂಡ, ಮಿಲ್ಲರ್-ಡುಸೆನ್ 64 ಎಸೆತಗಳಲ್ಲಿ 131 ಜತೆಯಾಟವಾಡಿದ ಲವಾಗಿ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ಗಳಿಸಿ ಜಯದ ನಗೆ ಬೀರಿತು.