ಕ್ರೀಡೆ

ಪಾಕಿಸ್ತಾನ ಎದುರು ಭಾರತ ತಂಡಕ್ಕೆ 10 ವಿಕೆಟ್ ಸೋಲು

ದುಬೈ: ಕಳೆದ 29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಅಜೇಯ ಸಾಧನೆ ಮಾಡಿದ್ದ ಭಾರತದ ಗೆಲುವಿನ ಓಟಕ್ಕೆ ಕೊನೆಗೂ ಬ್ರೇಕ್ ಬಿದ್ದಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಬಳಗ 10 ವಿಕೆಟ್‌ಗಳಿಂದ ಬಾಬರ್ ಅಜಮ್ ಪಡೆಗೆ ಮಣಿಯಿತು. ಏಕದಿನ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಭಾರತ ತಂಡ ಮೊದಲ ಬಾರಿಗೆ ಪಾಕ್ ವಿರುದ್ಧ ಸೋಲನುಭವಿಸಿತು.

ಟಾಸ್ ಸೋಲಿನಿಂದಲೇ ಹಿನ್ನಡೆ ಎದುರಿಸಿದ ಭಾರತ ತಂಡಕ್ಕೆ ಬಳಿಕ ಬೌಲಿಂಗ್ ವೇಳೆ ಇಬ್ಬನಿ ಸಮಸ್ಯೆ ಬಹುವಾಗಿ ಕಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಹೀನ್ ಷಾ ಅಫ್ರಿದಿ (31ಕ್ಕೆ 3) ಮಾರಕ ದಾಳಿಯಿಂದ ಆಘಾತ ನೀಡಿದರು. ನಾಯಕ ವಿರಾಟ್ ಕೊಹ್ಲಿ (57ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ರಿಷಭ್ ಪಂತ್ (39 ರನ್, 30 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನಿರ್ವಹಣೆ ನೆರವಿನಿಂದ ಭಾರತ ತಂಡ 7 ವಿಕೆಟ್‌ಗೆ 151 ರನ್ ಪೇರಿಸಿತು. ಪ್ರತಿಯಾಗಿ ಪಾಕ್ ತಂಡ, ಮೊಹಮದ್ ರಿಜ್ವಾನ್ (78*ರನ್, 55 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಬಾಬರ್ ಅಜಮ್ (68*ರನ್, 52 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ವಿಕೆಟ್ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್‌ಗಳಿಸಿ ಜಯದ ನಗೆ ಬೀರಿತು.

ಭಾರತ: 7 ವಿಕೆಟ್‌ಗೆ 151 (ವಿರಾಟ್ ಕೊಹ್ಲಿ 57, ರಿಷಭ್ ಪಂತ್ 39, ಜಡೇಜಾ 13, ಶಹೀನ್ ಷಾ ಅಫ್ರಿದಿ 31ಕ್ಕೆ 3, ಹಸನ್ ಅಲಿ 44ಕ್ಕೆ 2), ಪಾಕಿಸ್ತಾನ: 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 (ಮೊಹಮದ್ ರಿಜ್ವಾನ್ 78*, ಬಾಬರ್ ಅಜಮ್ 68*).