ಕ್ರೀಡೆ

ಟೀಮ್ ಇಂಡಿಯಾಗೆ ಜೇಮಿಸನ್ ಆಘಾತ; ಎಚ್ಚರಿಕೆ ಆರಂಭ ಕಂಡ ನ್ಯೂಜಿಲೆಂಡ್ ತಂಡ

raghukittur

ಸೌಥಾಂಪ್ಟನ್: ಜಿಗುಟಿನ ಬ್ಯಾಟಿಂಗ್ ನಡೆಸಿದರೂ ವೇಗಿಗಳ ಮಾರಕ ದಾಳಿ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ದಶಕದ ಸಂಭ್ರಮದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಕನಿಷ್ಠ ಅರ್ಧಶತಕ ಪೂರೈಸಿ ಸಂಭ್ರಮಿಸುವ ಅವಕಾಶ ತಪ್ಪಿಸಿಕೊಂಡರು. ಕಿವೀಸ್ ತಂಡದ ಯುವ ವೇಗಿ ಕೈಲ್ ಜೇಮಿಸನ್ (31ಕ್ಕೆ 5) ಮಾರಕ ದಾಳಿ ನಡೆಸಿ ಭಾರತದ ಬ್ಯಾಟಿಂಗ್ ಹಳಿ ತಪ್ಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು.

ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 146 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ ತಂಡ 92.1 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡಿತು. ಹಿಂದಿನ ದಿನದಾಟದ ಮೊತ್ತಕ್ಕೆ ಕೇವಲ 71 ರನ್ ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಪ್ರತಿಯಾಗಿ ಎಚ್ಚರಿಕೆ ಆರಂಭ ಕಂಡಿರುವ ನ್ಯೂಜಿಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 101 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 116 ರನ್‌ಗಳ ಅವಶ್ಯಕತೆಯಿದೆ. ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದ ಕಾರಣ ಮಂದಬೆಳಕಿನಿಂದಾಗಿ ಅರ್ಧಗಂಟೆ ಬೇಗನೆ ಆಟ ಶುರುವಾಗದೆ, ಎಂದಿನಂತೆ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆಟ ಆರಂಭಗೊಂಡಿತು.

*ಭಾರತಕ್ಕೆ ಜೇಮಿಸನ್ ಕಡಿವಾಣ

ವೇಗಿಗಳಿಗೆ ನೆರವಾಗುತ್ತಿರುವ ಪಿಚ್‌ನ ಲಾಭ ಗಿಟ್ಟಿಸಿಕೊಂಡ ಕೈಲ್ ಜೇಮಿಸನ್ ಭಾರತದ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದರು. 26 ವರ್ಷದ ಬಲಗೈ ಮಧ್ಯಮ ವೇಗಿ ದಾಳಿ ಎದುರು ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡಿದರು. ಕ್ರಮವಾಗಿ 44 ಮತ್ತು 29 ರನ್‌ಗಳಿಂದ ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಜೋಡಿ ದಿನದ ಆರಂಭದಲ್ಲೇ ಬೇರ್ಪಟ್ಟಿತು. ಶನಿವಾರದ ಮೊತ್ತಕ್ಕೆ ಕೇವಲ 3 ರನ್ ಗಳಿಸಿದ್ದ ವೇಳೆ ಕೊಹ್ಲಿ, ಆರ್‌ಸಿಬಿ ತಂಡದಲ್ಲಿ ಸಹ-ಆಟಗಾರರಾಗಿರುವ ಜೇಮಿಸನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಬಳಿಕ ಬಂದ ರಿಷಭ್ ಪಂತ್ (4) ಬೌಂಡರಿ ಸಿಡಿಸಿ ಉತ್ತಮ ಆರಂಭ ಪಡೆಯಲು ಯತ್ನಿಸಿದರೂ ಜೇಮಿಸನ್ ಎಸೆತದಲ್ಲೇ ಲಾಥಮ್‌ಗೆ ಕ್ಯಾಚ್ ನೀಡಿದರು. ಮತ್ತೊಂದೆಡೆ ತಾಳ್ಮೆಯ ನಿರ್ವಹಣೆ ಮೂಲಕ ಕ್ರೀಸ್‌ನಲ್ಲಿ ನಿಲ್ಲಲು ಯತ್ನಿಸಿದ ಅಜಿಂಕ್ಯ ರಹಾನೆ (49ರನ್, 117 ಎಸೆತ, 5 ಬೌಂಡರಿ) 6ನೇ ವಿಕೆಟ್‌ಗೆ ಆಲ್ರೌಂಡರ್ ಜಡೇಜಾ (15) ಜತೆಗೂಡಿ 26 ರನ್ ಜತೆಯಾಟವಾಡಿದರು. ವ್ಯಾಗ್ನರ್ ಎಸೆತದಲ್ಲಿ ರಹಾನೆ ಲಾಥಮ್‌ಗೆ ಕ್ಯಾಚ್ ನೀಡಿ ಕೇವಲ 1 ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡರು. ಸ್ಪಿನ್ ಜೋಡಿ ಜಡೇಜಾ ಹಾಗೂ ಅಶ್ವಿನ್ (22) ಜೋಡಿ ಕೆಲಕಾಲ ಆಧರಿಸಿದರೂ ಕಿವೀಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಬಾಲಂಗೋಚಿಗಳಾದ ಇಶಾಂತ್ ಶರ್ಮ (4) ಹಾಗೂ ಜಸ್‌ಪ್ರೀತ್ ಬುಮ್ರಾ (0) ಜೋಡಿಗೆ ಕಡಿವಾಣ ಹಾಕುವ ಮೂಲಕ 250ರ ಗಡಿ ದಾಟುವ ಉತ್ಸಾಹದಲ್ಲಿದ್ದ ಭಾರತಕ್ಕೆ ಜೇಮಿಸನ್ ಬ್ರೇಕ್ ಹಾಕಿದರು.

*ಕಿವೀಸ್‌ಗೆ ಅಶ್ವಿನ್ ಮೊದಲ ಶಾಕ್

ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಡಿವಾಣ ಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಎಚ್ಚರಿಕೆಯ ಆರಂಭ ಕಂಡ ಬಳಿಕ ಸ್ಪಿನ್ನರ್ ಆರ್. ಅಶ್ವಿನ್ ಶಾಕ್ ನೀಡಿದರು. ಭಾರತದ ಕರಾರುವಾಕ್ ದಾಳಿ ಎದುರು ಟಾಮ್ ಲಾಥಮ್ (30 ರನ್, 104 ಎಸೆತ, 3 ಬೌಂಡರಿ) ಹಾಗೂ ಡೆವೊನ್ ಕಾನ್‌ವೇ (54*ರನ್, 153 ಎಸೆತ, 6 ಬೌಂಡರಿ) ಜೋಡಿ ಮೊದಲ ವಿಕೆಟ್‌ಗೆ 70 ರನ್ ಪೇರಿಸಿತು. ಆಗ ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಭಾರತಕ್ಕೆ ಮೊದಲ ಯಶ ಒದಗಿಸಿದರು. ಕಾನ್‌ವೇ ಹಾಗೂ ವಿಲಿಯಮ್ಸನ್ (12*ರನ್, 37ಎಸೆತ, 1 ಬೌಂಡರಿ) ಜೋಡಿ 2ನೇ ವಿಕೆಟ್‌ಗೆ 31 ರನ್ ಕಲೆಹಾಕಿತು. ಈ ವೇಳೆ ಇಶಾಂತ್ ಶರ್ಮ ಕಾನ್‌ವೇ ವಿಕೆಟ್ ಕಬಳಿಸಿದರು.

ಭಾರತ: 92.1 ಓವರ್‌ಗಳಲ್ಲಿ 217 (ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ಆರ್.ಅಶ್ವಿನ್ 22, ಕೈಲ್ ಜೇಮಿಸನ್ 31ಕ್ಕೆ 5, ಟ್ರೆಂಟ್ ಬೌಲ್ಟ್ 47ಕ್ಕೆ 2, ನೀಲ್ ವಾಗ್ನರ್ 40ಕ್ಕೆ 2), ನ್ಯೂಜಿಲೆಂಡ್: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 (ಟಾಮ್ ಲಾಥಮ್ 30, ಡೆವೊನ್ ಕಾನ್‌ವೇ 54, ಇಶಾಂತ್ ಶರ್ಮ 19ಕ್ಕೆ 1, ಆರ್.ಅಶ್ವಿನ್ 20ಕ್ಕೆ 1).