ಕ್ರೀಡೆ

ಸ್ನೇಹ ರಾಣಾ, ದೀಪ್ತಿ ಶರ್ಮ ಮಾರಕ ದಾಳಿ; ಇಂಗ್ಲೆಂಡ್‌ಗೆ ಕಡಿವಾಣ ಹೇರಿದ ಭಾರತ

ಬ್ರಿಸ್ಟಲ್: ನಾಯಕಿ ಹೀದರ್ ನೈಟ್ (95ರನ್, 175 ಎಸೆತ, 9 ಬೌಂಡರಿ) ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟುಗಾರ್ತಿಯರ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದ ಇಂಗ್ಲೆಂಡ್ ಮಹಿಳಾ ತಂಡಕ್ಕೆ ಭಾರತದ ಸ್ನೇಹ ರಾಣಾ (77ಕ್ಕೆ 3) ಹಾಗೂ ದೀಪ್ತಿ ಶರ್ಮ (50ಕ್ಕೆ 2) ಕಡಿವಾಣ ಹೇರಿದರು. ಕೌಂಟಿ ಮೈದಾನದಲ್ಲಿ ಬುಧವಾರ ಆರಂಭಗೊಂಡ ಚತುರ್ದಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 92 ಓವರ್‌ಗಳಲ್ಲಿ 6 ವಿಕೆಟ್‌ಗೆ 269 ರನ್‌ಗಳಿಸಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಮಿಥಾಲಿ ರಾಜ್ ಪಡೆಗೆ ಇಂಗ್ಲೆಂಡ್ ತಂಡದ ಅಗ್ರಕ್ರಮಾಂಕ ಬ್ಯಾಟುಗಾರ್ತಿಯರು ಕಂಟಕವಾದರು.

ಇಂಗ್ಲೆಂಡ್ ಉತ್ತಮ ಆರಂಭ:

ಲೌರೆನ್ ವಿನ್‌ಫೀಲ್ಡ್ ಹಿಲ್ (35ರನ್, 63 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಟ್ಯಾಮಿ ಬಿಯಾಮಂಟ್ (66ರನ್, 144 ಎಸೆತ, 6 ಬೌಂಡರಿ) ಆರಂಭಿಕ ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ನೀಡಿತು. ಹೆಚ್ಚು ಅಭ್ಯಾಸ ಪಂದ್ಯವಾಡದೆ ಕಣಕ್ಕಿಳಿದ ಭಾರತದ ಬೌಲರ್‌ಗಳನ್ನು ಈ ಜೋಡಿ ಸಮರ್ಥವಾಗಿ ಎದುರಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 69 ರನ್ ಪೇರಿಸಿತು. ವೇಗಿ ಪೂಜಾ ವಸಾಕರ್ ಲೌರೆನ್ ಅವರನ್ನು ವಿಕೆಟ್ ಕಬಳಿಸಿದರು. ಬಳಿಕ ಜತೆಯಾದ ಬಿಯಾಮಂಟ್ ಹಾಗೂ ಹೀದರ್ ನೈಟ್ ಜೋಡಿ 2ನೇ ವಿಕೆಟ್‌ಗೆ 71 ಜತೆಯಾಟವಾಡಿತು. ಮಿಥಾಲಿ ರಾಜ್ ಪಡೆ ಪಾಲಿಗೆ ತಡೆಗೋಡೆಯಾದ ನಾಯಕಿ ಹೀದರ್ ನೈಟ್ ಹಾಗೂ ನತಾಲಿ ಸ್ವಿವೆರ್ ಜೋಡಿ ಮುರಿಯದ 3ನೇ ವಿಕೆಟ್‌ಗೆ 90 ರನ್ ಪೇರಿಸಿತು. ಬಳಿಕ ಸ್ನೇಹಾ ರಾಣಾ ಹಾಗೂ ದೀಪ್ತಿ ಶರ್ಮ ಜೋಡಿಯ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಕೇವಲ 21 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.

ಇಂಗ್ಲೆಂಡ್: 92 ಓವರ್‌ಗಳಲ್ಲಿ 6 ವಿಕೆಟ್‌ಗೆ 269 (ಟ್ಯಾಮಿ ಬಿಯಾಮಂಟ್ 66, ಹೀದರ್ ನೈಟ್ 95, ನತಾಲಿ ಸ್ವಿವೆರ್ 42, ಪೂಜಾ ವಸಾಕರ್ 43ಕ್ಕೆ 1, ಸ್ನೇಹ ರಾಣಾ 77ಕ್ಕೆ 3, ದೀಪ್ತಿ ಶರ್ಮ 50ಕ್ಕೆ 2).