ಚೆಲ್‌ಮ್ಸ್ ಫೋರ್ಡ್: ಭಾರತ ಹಾಗೂ ಇಂಗ್ಲೆಂಡ್ ಮಹಿಳೆಯರ ನಿರ್ಣಾಯಕ ಹಾಗೂ 3ನೇ ಟಿ20 ಪಂದ್ಯ ಬುಧವಾರ ನಡೆಯಲಿದೆ. ಉಭಯ ತಂಡಗಳು ತಲಾ 1 ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿವೆ. 2019ರ ಬಳಿಕ ಹರ್ಮಾನ್‌ಪ್ರೀತ್ ಕೌರ್ ಪಡೆ ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಸ್ಪಿನ್ ಬೌಲಿಂಗ್ ಜೋಡಿ ಪೂನಂ ಯಾದವ್ ಹಾಗೂ ದೀಪ್ತಿ ಶರ್ಮ ಎರಡನೇ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಉತ್ತಮ ನಿರ್ವಹಣೆ ಮೂಲಕ ಗಮನಸೆಳೆದಿದ್ದರು. ತವರಿನಿಂದ ಹೊರಗೆ ಟಿ20 ಸರಣಿ ಜಯಿಸುವ ಅತ್ಯುತ್ತಮ ಅವಕಾಶವೊಂದು ಭಾರತ ಮಹಿಳಾ ತಂಡದ ಮುಂದಿದೆ.
2019ರಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ಕಡೇ ಬಾರಿಗೆ ವಿದೇಶಿ ನೆಲದಲ್ಲಿ ಟ್ರೋಫಿ ಜಯಿಸಿದೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಭಾರತ ತಂಡ, ಏಕದಿನ ಸರಣಿಯಲ್ಲಿ 1-2 ರಿಂದ ಮುಗ್ಗರಿಸಿತ್ತು. ಇದೀಗ ಚುಟುಕು ಕ್ರಿಕೆಟ್ ಸರಣಿ ಗೆಲುವಿನೊಂದಿಗೆ ಸುದೀರ್ಘ ಅವಧಿಯ ಇಂಗ್ಲೆಂಡ್ ಪ್ರವಾಸಕ್ಕೆ ವಿದಾಯ ಹೇಳುವ ಕನಸಿನಲ್ಲಿದೆ. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ ಸ್ಫೋಟಿಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಕಡೇ ಪಂದ್ಯದಲ್ಲಾದರೂ ಸ್ಫೋಟಿಸಬೇಕಿದೆ. ವೇಗಿಗಳಾದ ಶಿಖಾ ಪಾಂಡೆ ಹಾಗೂ ಅರುಂಧತಿ ರೆಡ್ಡಿ ಜೋಡಿ ಉತ್ತಮ ಲಯದಲ್ಲಿದೆ. ಮತ್ತೊಂದೆಡೆ, ಆತಿಥೇಯ ಇಂಗ್ಲೆಂಡ್ ತಂಡ ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ವಿಶ್ವಾಸದಲ್ಲಿದೆ.
ಪಂದ್ಯ ಆರಂಭ: ರಾತ್ರಿ 11 ಗಂಟೆಗೆ
ನೇರಪ್ರಸಾರ: ಸೋನಿ ನೆಟ್‌ವರ್ಕ್