ಕ್ರೀಡೆ

ಕಮಾನ್ ಇಂಡಿಯಾ ಬೇಕೇಬೇಕು ಜಯ, ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ

raghukittur

ಚೆನ್ನೈ: ಮೊದಲ ಹೆಜ್ಜೆಯಲ್ಲೇ ಎಡವಿಬಿದ್ದ ಮೇಲೆ ಮೈಕೊಡವಿ ಮೇಲೇಳುವುದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಹೊಸತೇನೂ ಅಲ್ಲ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್‌ನಲ್ಲಿ 36 ರನ್‌ಗೆ ಕುಸಿದು ಹೀನಾತಿಹೀನ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ ನಂತರದ ಮೂರು ಟೆಸ್ಟ್‌ಗಳಲ್ಲಿ ಎರಡರಲ್ಲಿ ಜಯ, ಒಂದು ಡ್ರಾ ಸಾಧಿಸಿ ಐತಿಹಾಸಿಕ ಸಾಧನೆಗೈದಿತ್ತು. ಕಾಂಗರೂ ನೆಲದಲ್ಲಿ ಕೊಹ್ಲಿ ಗೈರಿನಲ್ಲಿ ಅಜಿಂಕ್ಯ ರಹಾನೆ ನಾಯಕರಾಗಿ ಸಾಧಿಸಿದ್ದನ್ನು ಇದೀಗ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಪುನರಾವರ್ತಿಸಲೇಬೇಕಾದ ಅನಿವಾರ್ಯ ಒತ್ತಡದಲ್ಲಿದ್ದಾರೆ.

ಹೌದು, ಪ್ರವಾಸಿ ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೆಟ್ಟ ಸೋಲು ಅನುಭವಿಸಿರುವ ಭಾರತ ತಂಡ ಚೆನ್ನೈನಲ್ಲೇ ಶನಿವಾರ ಆರಂಭವಾಗುವ 2ನೇ ಟೆಸ್ಟ್‌ನಲ್ಲಿ ಪುಟಿದೇಳಲೇಬೇಕಿದೆ. ಪ್ರತಿಷ್ಠೆ ದೃಷ್ಟಿಯಿಂದ, ಸರಣಿ ಜೀವಂತವಿಡುವ ಸಲುವಾಗಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುವ ಕಾರಣಕ್ಕಾಗಿ ಭಾರತ ಈ ಪಂದ್ಯ ಗೆಲ್ಲಲೇಬೇಕು. ಇಂಥ ನಿರ್ಣಾಯಕ ಸಮರಕ್ಕಾಗಿ ಸಾಂಪ್ರದಾಯಿಕ ಸ್ಪಿನ್ ಪಿಚ್ ಸಿದ್ಧಪಡಿಸಲಾಗಿದ್ದು, ಮೊದಲ ದಿನವೇ ಪಿಚ್ ತಿರುವು ಪ್ರದರ್ಶಿಸುವ ನಿರೀಕ್ಷೆ ಇದೆ. ಖಾಲಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಆಡಿದ್ದ ಆಟಗಾರರನ್ನು ಹುರಿದುಂಬಿಸಲು 2ನೇ ಟೆಸ್ಟ್‌ನಲ್ಲಿ ಸುಮಾರು 15 ಸಾವಿರ ಪ್ರೇಕ್ಷಕರಿರುತ್ತಾರೆ. ಕೊಹ್ಲಿ ಟಾಸ್ ಗೆದ್ದರೆ, ಗುರಿ ಸಾಧನೆಗೆ ಅನುಕೂಲ. ಟಾಸ್ ಕೈತಪ್ಪಿದರೂ, ಪಂದ್ಯ ಕೈತಪ್ಪದಂತೆ ಆಡುವ ಸವಾಲನ್ನು ಬ್ಯಾಟ್ಸ್‌ಮನ್‌ಗಳು ಸ್ವೀಕರಿಸಿದರೆ, ಆಸ್ಟ್ರೇಲಿಯಾದಲ್ಲಿ ಸಾಧ್ಯವಾಗಿದ್ದು, ಭಾರತದಲ್ಲೂ ಸಾಧ್ಯವಾಗಲಿದೆ.

* ಅಕ್ಷರ್ ಪಟೇಲ್‌ಗೆ ಸ್ಥಾನ

ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಅಕ್ಷರ್ ಪಟೇಲ್, ಶಾಬಾಜ್ ನದೀಂ ಬದಲಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಶ್ವಿನ್ ಜತೆಗೂಡಿ ಸ್ಪಿನ್ ವಿಭಾಗದಲ್ಲಿ ಚೆಂಡು ಹಂಚಿಕೊಳ್ಳಲಿದ್ದಾರೆ. ಇದರಿಂದ ತಂಡಕ್ಕೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲದ ತುಂಬಿದಂತಾಗಲಿದೆ. ರವೀಂದ್ರ ಜಡೇಜಾ ಸ್ಥಾನವನ್ನು ಸಮರ್ಥವಾಗಿ ತುಂಬುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಪ್ರವಾಸದಲ್ಲೂ ಏಕೈಕ ಪಂದ್ಯವಾದಡೆ ವಾಪಸಾಗಿದ್ದ ಕುಲದೀಪ್ ಯಾದವ್ 20 ವರ್ಷದ ವಾಷಿಂಗ್ಟನ್ ಸುಂದರ್ ಬದಲಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಇದರಿಂದಾಗಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಈ ಪಂದ್ಯದಲ್ಲೂ ಕಣಕ್ಕಿಳಿಯುವ ಸಾಧ್ಯತೆಗಳು ಕಡಿಮೆ ಇದೆ.

ಸಂಭಾವ್ಯ ತಂಡ: ರೋಗಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೀ), ಆರ್.ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್/ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮ, ಜಸ್‌ಪ್ರೀತ್ ಬುಮ್ರಾ.

* ಇಂಗ್ಲೆಂಡ್ ತಂಡದಲ್ಲಿ 4 ಬದಲಾವಣೆ

ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಪ್ರವಾಸಿ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ ಪಕ್ಕಾ ಆಗಿದೆ. ನಾಯಕ ಜೋ ರೂಟ್ 4 ಬದಲಾವಣೆಯೊಂದಿಗೆ 12 ಮಂದಿ ಹೆಸರನ್ನು ಪ್ರಕಟಿಸಿದ್ದಾರೆ. ಆರ್ವತನ ಪದ್ದತಿಯಂತೆ ಜೇಮ್ಸ್ ಆಂಡರ್‌ಸನ್‌ಗೆ ವಿಶ್ರಾಂತಿ ನೀಡಿ ಸ್ಟುವರ್ಟ್ ಬ್ರಾಡ್‌ಗೆ ಅವಕಾಶ ಕಲ್ಪಿಸಿದರೆ, ಸ್ಪಿನ್ನರ್ ಡೊಮಿನಿಕ್ ಬೆಸ್ ಬದಲಿಗೆ ಅನುಭವಿ ಮೊಯಿನ್ ಅಲಿ ಸ್ಥಾನ ಪಡೆದಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಿರುವ ವಿಕೆಟ್ ಕೀಪರ್ ಜೋಸ್ ಬಟ್ಲರ್ ಸ್ಥಾನವನ್ನು ಬೆನ್ ಫೋಕ್ಸ್ ತುಂಬಲಿದ್ದಾರೆ. ಗಾಯಾಳು  ಆರ್ಚರ್ ಬದಲಿಗೆ ಕ್ರಿಸ್ ವೋಕ್ಸ್ ಅಥವಾ ಒಲಿ ಸ್ಟೋನ್ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಸಂಭಾವ್ಯ ತಂಡ: ಡೊಮಿನಿಕ್ ಸಿಬ್ಲೆ, ರೋರಿ ಬರ್ನ್ಸ್, ಡೇನಿಯಲ್ ಲಾರೆನ್ಸ್, ಜೋ ರೂಟ್, ಬೆನ್ ಸ್ಟೋಕ್ಸ್, ಒಲಿ ಪೋಪ್, ಬೆನ್ ಫೋಕ್ಸ್ (ವಿಕೀ), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್/ಒಲಿ ಸ್ಟೋನ್, ಜಾಕ್ ಲೀಚ್.

* ಪಿಚ್ ರಿಪೋರ್ಟ್:

ಚೆನ್ನೈನಲ್ಲಿ ಬಿಸಿಲಿನ ವಾತಾವರಣ ಹೆಚ್ಚು ಇರುವುದರಿಂದ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗುವ ಸಾಧ್ಯತೆಗಳಿವೆ. ಮೊದಲ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಮಿಂಚಿದ್ದರು. ಅಲ್ಲದೆ,ಫೀಲ್ಡಿಂಗ್ ಮಾಡುವುದು ದುಸ್ತರವಾಗಲಿದೆ. ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸವಾಲಿನ ಪಿಚ್ ಇದಾಗಿದೆ.

ಟೀಮ್ ಇಂಡಿಯಾಗೆ ಪ್ರೇಕ್ಷಕರ ಬೆಂಬಲ..!

ಶೇಕಡ 50 ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಿರುವುದರಿಂದ 32 ಸಾವಿರ ಸಾಮರ್ಥ್ಯ ಸ್ಟೇಡಿಯಂನಲ್ಲಿ ಕನಿಷ್ಠ 15 ಸಾವಿರ ಮಂದಿ ಪ್ರೇಕ್ಷಕರು ಪಂದ್ಯ ವೀಕ್ಷಿಸುವ ಸಾಧ್ಯತೆಗಳಿವೆ. ಬಯೋ ಬಬಲ್ ಹಿನ್ನೆಲೆಯಲ್ಲಿ ಡ್ರೆಸ್ಸಿಂಗ್ ರೂಂ ಹೊಂದಿಕೊಂಡಂತೆ ಇರುವ ಪೆವಿಲಿಯನ್ ಅನ್ನು ಸಂಪೂರ್ಣ ಸೀಲ್ ಮಡಲಾಗಿದೆ. ಪೆವಿಲಿಯನ್ ಟೆರೆಸ್‌ನಲ್ಲಿ ಕೇವಲ 600 ಮಂದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಈ ಸ್ಟಾೃಂಡ್‌ಗೆ ಕೇವಲ ಪದಾಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಟಿಎನ್‌ಸಿಎ ಕಾರ್ಯದರ್ಶಿ ಆರ್‌ಎಸ್ ರಾಮಸ್ವಾಮಿ ತಿಳಿಸಿದ್ದಾರೆ.

* 21: ಭಾರತ ತಂಡ ಜಯ ದಾಖಲಿಸಿದರೆ, ವಿರಾಟ್ ಕೊಹ್ಲಿ ತವರಿನಲ್ಲಿ ಅತಿಹೆಚ್ಚು ಪಂದ್ಯ ಜಯಿಸಿದ ಧೋನಿ (21) ದಾಖಲೆಯನ್ನು ಸರಿಗಟ್ಟಲಿದ್ದಾರೆ.

* 2012-13ರಲ್ಲಿ ಕಡೇ ಬಾರಿಗೆ ಭಾರತ ತವರಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಅದು ಇಂಗ್ಲೆಂಡ್ ವಿರುದ್ಧವೇ ಸೋಲು ಕಂಡಿತ್ತು.

* 3: ಅಶ್ವಿನ್ 3 ವಿಕೆಟ್ ಕಬಳಿಸಿದರೆ ಸ್ವದೇಶದಲ್ಲಿ 265 ವಿಕೆಟ್ ಕಬಳಿಸಿದಂತಾಗುತ್ತಿದೆ. ಇದರೊಂದಿಗೆ ಹರ್ಭಜನ್ ಸಿಂಗ್ ದಾಖಲೆಯನ್ನು ಹಿಂದಿಕ್ಕಿ ಸ್ವದೇಶದಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ (350) ಮೊದಲ ಸ್ಥಾನದಲ್ಲಿದ್ದಾರೆ.

* 10: ಸ್ಟುವರ್ಟ್ ಬ್ರಾಡ್, ಭಾರತ ನೆಲದಲ್ಲಿ ಆಡಿದ ಕಳೆದ 6 ಟೆಸ್ಟ್ ಪಂದ್ಯಗಳಿಂದ ಕೇವಲ 10 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ.

* 5: ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಸೋತರೂ ಇದುವರೆಗೂ 5 ಬಾರಿ ಸರಣಿ ಜಯಿಸಿದ ಇತಿಹಾಸ ಹೊಂದಿದೆ. ಇದರಲ್ಲಿ ಕಳೆದ 6 ವರ್ಷದಲ್ಲೇ 3 ಬಾರಿ ಈ ದೃಷ್ಟಾಂತ ನಡೆದಿದೆ. 2015ರಲ್ಲಿ ಶ್ರೀಲಂಕಾ, 2017ರಲ್ಲಿ ಆಸ್ಟ್ರೇಲಿಯಾ ಹಾಗೂ 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಈ ಸಾಧನೆ ಮಾಡಿದೆ.

* 7: ಇಂಗ್ಲೆಂಡ್ ತಂಡ ಜಯ ದಾಖಲಿಸಿದರೆ ಏಷ್ಯಾ ನೆಲದಲ್ಲಿ ಸತತ 7 ಜಯ ಕಂಡಿರುವ ಆಸ್ಟ್ರೇಲಿಯಾ ದಾಖಲೆಯನ್ನು ಸರಿಗಟ್ಟಲಿದೆ.

‘ಪಿಚ್ ಸಂಪೂರ್ಣ ವಿಭಿನ್ನವಾಗಿ ಕಾಣುತ್ತಿದೆ. ಮೊದಲ ದಿನದಿಂದಲೇ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಮೊದಲ ಪಂದ್ಯದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದೆ ನೋಡಬೇಕು. ಉತ್ತಮ ಕ್ರಿಕೆಟ್ ಆಡುವುದಷ್ಟೇ ತಂಡದ ಗುರಿ. ಪರಿಸ್ಥಿತಿಗೆ ತಕ್ಕಂತೆ ಆಟಗಾರರು ಕೂಡ ತಂಡಕ್ಕೆ ನೆರವಾಗಬೇಕಿದೆ’ ಅಜಿಂಕ್ಯ ರಹಾನೆ, ಭಾರತ ತಂಡದ ಉಪನಾಯಕ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್