ಕ್ರೀಡೆ

ಟಾಸ್ ಕಾಣದೆ ರದ್ದುಗೊಂಡ ಭಾರತ-ಕೆನಡಾ ಪಂದ್ಯ: ತಲಾ ಒಂದು ಅಂಕ ಹಂಚಿಕೆ

ಲೌಡೆರ್‌ಹಿಲ್: ಭಾರತ ಹಾಗೂ ಕೆನಡಾ ನಡುವಿನ ಐಸಿಸಿ ಟಿ20 ವಿಶ್ವಕಪ್‌ನ ಲೀಗ್ ಪಂದ್ಯ ಮಳೆ ಮತ್ತು ಒದ್ದೆ ಮೈದಾನದಿಂದಾಗಿ ಟಾಸ್ ಕೂಡ ಕಾಣದೆ ರದ್ದುಗೊಂಡಿದೆ. ಇದರೊಂದಿಗೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಜತೆಗೆ ರೋಹಿತ್ ಶರ್ಮ ಪಡೆ ಎ ಗುಂಪಿನ ಅಗ್ರಸ್ಥಾನವನ್ನು ಕಾಯ್ದು, ಅಜೇಯವಾಗಿ ಸೂಪರ್-8 ಹಂತಕ್ಕೇರಿದೆ.

ಬ್ರೋವರ್ಡ್ ಕ್ರೀಡಾಂಗಣದಲ್ಲಿ ಶನಿವಾರ ನಿಗದಿಯಾಗಿದ್ದ ಪಂದ್ಯಕ್ಕೆ ಮಳೆ ಬಿಡುವು ನೀಡಿದರೂ, ಒದ್ದೆಯಾಗಿದ್ದ ಮೈದಾನದಿಂದಾಗಿ ಪಂದ್ಯ ರದ್ದುಗೊಳಿಸಲಾಯಿತು. ಇದರಿಂದಾಗಿ ಸತತ 2ನೇ ದಿನವೂ ್ಲಾರಿಡಾದಲ್ಲಿ ಪಂದ್ಯ ನಡೆಯಲಿಲ್ಲ. ಶುಕ್ರವಾರ ಅಮೆರಿಕ-ಐರ್ಲೆಂಡ್ ನಡುವಿನ ಪಂದ್ಯ ರದ್ದುಗೊಂಡ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಮೈದಾನ ಸಂಪೂರ್ಣವಾಗಿ ತೇವಗೊಂಡಿತ್ತು. ಇಂಡೋ-ಕೆನಡಾ ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸಲು ಸಿಬ್ಬಂದಿ ಹರಸಾಹಸಪಟ್ಟರೂ, ಪ್ರಯತ್ನ ಲಿಸಲಿಲ್ಲ. ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ) 2ನೇ ಬಾರಿ ಮೈದಾನದ ಔಟ್‌ಫೀಲ್ಡ್ ಪರೀಕ್ಷಿಸಿದ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.