ಕ್ರೀಡೆ

ಇತಿಹಾಸ ನಿರ್ಮಿಸುವ ತವಕದಲ್ಲಿ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ: ಒಲಿಂಪಿಕ್ಸ್ ಇತಿಹಾಸದಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಎಂಟರಘಟ್ಟಕ್ಕೇರಿರುವ ಭಾರತ ಮಹಿಳಾ ತಂಡ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕಡೇ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡ, 6 ಪಾಯಿಂಟ್ಸ್‌ಗಳೊಂದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕಡೇ ಎರಡು ಹಣಾಹಣಿಯಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯ ದಾಖಲಿಸಿತ್ತು. ಮಹಿಳಾ ತಂಡ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಾಗ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿತ್ತು.

ದ.ಆಫ್ರಿಕಾ ಎದುರು ಹ್ಯಾಟ್ರಿಕ್ ಸಿಡಿಸಿದ್ದ ಅನುಭವಿ ಸ್ಟ್ರೈಕರ್ ವಂದನಾ ಕಟಾರಿಯಾ ಆಸೀಸ್ ವಿರುದ್ಧವೂ ಅದೇ ಲಯ ಮುಂದುವರಿಸಬೇಕಿದೆ. ರಾಣಿ ರಾಂಪಾಲ್ ಪಡೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳದಿರುವುದೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ವತಃ ರಾಣಿ ರಾಂಪಾಲ್, ಶರ್ಮಿಳಾ ದೇವಿ, ಲಾಲ್ರಿಮ್‌ಸಿಯಾಮಿ ಹಲವು ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಿಂದ 33 ಪೆನಾಲ್ಟಿ ಕಾರ್ನರ್ ದಕ್ಕಿದರೂ ಕೇವಲ 4 ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿಕೊಂಡಿದೆ. ಮತ್ತೊಂದೆಡೆ, ವಿಶ್ವ ನಂ.4 ಆಸ್ಟ್ರೇಲಿಯಾ ತಂಡವೇ ೇವರಿಟ್ ಎನಿಸಿದರೂ ವಿಶ್ವ ನಂ.10ನೇ ಸ್ಥಾನದಲ್ಲಿರುವ ಭಾರತ, ಅಚ್ಚರಿ ಫಲಿತಾಂಶ ನೀಡುವ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಬೆಳಗ್ಗೆ 8.30ಕ್ಕೆ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್