ಕ್ರೀಡೆ

ಇಂದು ಭಾರತ-ಆಸೀಸ್ ಮಹಿಳೆಯರ ಮೊದಲ ಟಿ20 ಕದನ

ಗೋಲ್ಡ್‌ಕೋಸ್ಟ್: ಏಕೈಕ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಮೇಲುಗೈ ಸಾಧಿಸಿದ ವಿಶ್ವಾಸದಲ್ಲಿರುವ ಭಾರತ ಮಹಿಳಾ ತಂಡ ಪ್ರವಾಸದ ಕೊನೇ ಭಾಗವಾದ ಟಿ20 ಸರಣಿಗೆ ಸಜ್ಜಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಆಗಮನದಿಂದ ಹೆಚ್ಚಿನ ಬಲ ಪಡೆದಿರುವ ಭಾರತ ತಂಡ ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಶುಭಾರಂಭ ಕಾಣಲು ಸನ್ನದ್ಧವಾಗಿದೆ. 32 ವರ್ಷದ ಹರ್ಮಾನ್‌ಪ್ರೀತ್, ಕೈಬೆರಳು ಗಾಯದಿಂದಾಗಿ ಏಕದಿನ ಹಾಗೂ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಏಕದಿನ ಸರಣಿಯಲ್ಲಿ ಭಾರತ 1-2ರಿಂದ ಸೋಲನುಭವಿಸಿದರೂ ಪ್ರಬಲ ಪೈಪೋಟಿ ನೀಡಿ ಗಮನಸೆಳೆದಿತ್ತು.

ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಮಿಥಾಲಿ ರಾಜ್ ಪಡೆ ಯಶಸ್ವಿಯಾಗಿತ್ತು. ಟೆಸ್ಟ್‌ನಲ್ಲಿ ಶತಕ ಸಿಡಿಸಿದ ವಿಶ್ವಾಸದಲ್ಲಿರುವ ಸ್ಮತಿ ಮಂದನಾ ಹಾಗೂ ಯುವ ಬ್ಯಾಟರ್ ಶೆಫಾಲಿ ವರ್ಮ ಉತ್ತಮ ಆರಂಭ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ. ಹರ್ಮಾನ್‌ಪ್ರೀತ್ ಆಗಮನದಿಂದಾಗಿ ತಂಡದ ಬ್ಯಾಟಿಂಗ್ ಬಲ ವೃದ್ಧಿಸಿದೆ. ಸತತ 26 ಏಕದಿನ ಪಂದ್ಯಗಳನ್ನು ಜಯಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಆಸ್ಟ್ರೇಲಿಯಾಗೆ ಭಾರತ ತಂಡ ಲಗಾಮು ಹಾಕಿತ್ತು. ಇದೀಗ ಟಿ20 ಸರಣಿಯಲ್ಲಿ ಆಘಾತ ನೀಡಲು ಮಹಿಳಾ ಬಳಗ ಸಜ್ಜಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 2.10, ನೇರಪ್ರಸಾರ: ಸೋನಿ ನೆಟ್‌ವರ್ಕ್

ಮುಖಾಮುಖಿ: 20, ಆಸ್ಟ್ರೇಲಿಯಾ: 14, ಭಾರತ: 6

ಆಸ್ಟ್ರೇಲಿಯಾದಲ್ಲಿ: 9, ಆಸ್ಟ್ರೇಲಿಯಾ: 5, ಭಾರತ: 4