ಕ್ರೀಡೆ

VIDEO: ಶಿಖಾ ಪಾಂಡೆ ಮ್ಯಾಜಿಕ್ ಎಸೆತಕ್ಕೆ ಮಾಜಿ ಕ್ರಿಕೆಟಿಗರು ಫಿದಾ..!

ಗೋಲ್ಡ್‌ಕೋಸ್ಟ್: ಭಾರತದ ವೇಗದ ಬೌಲರ್ ಶಿಖಾ ಪಾಂಡೆ ‘ಶತಮಾನದ ಎಸೆತ’ ಎಸೆದ ಗೌರವಕ್ಕೆ ಪಾತ್ರರಾದರು. ಇನಿಂಗ್ಸ್‌ನ ಮೊದಲ ಓವರ್‌ನ 2ನೇ ಎಸೆತದಲ್ಲಿ ಅಲೈಸಾ ಹೀಲಿ ಅವರನ್ನು ಸ್ವಿಂಗ್ ಎಸೆತದ ಮೂಲಕ ಬೌಲ್ಡ್ ಮಾಡಿದರು. ಸುಮಾರು 6-8 ಸ್ಟಂಪ್ಸ್ ದೂರದಲ್ಲೇ ಬಿದ್ದ ಚೆಂಡು, ಆಸೀಸ್ ಬ್ಯಾಟರ್‌ಗೆ ಕಣ್ತಿಪಿಸಿ ಮಿಡ್ ಸ್ಟಂಪ್‌ಗೆ ಬಡಿಯಿತು. ಬಳಿಕ ಈ ಎಸೆತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದ ಮಾಜಿ ಆಟಗಾರ ವಾಸೀಂ ಜಾರ್ ಈ ಎಸೆತವನ್ನು ಶತಮಾನದ ಎಸೆತ ಎಂದು ಬರೆದು ವಿಡಿಯೋ ಜತೆಗೆ ಟ್ವೀಟ್ ಮಾಡಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಇದೇ ಮಾದರಿಯ ಎಸೆತ 1993ರಲ್ಲಿ ದಾಖಲಾಗಿತ್ತು ಎಂದು ಶೇನ್ ವಾರ್ನೆ ಎಸೆತವನ್ನು ಉಲ್ಲೇಖಿಸಿದ್ದಾರೆ.

ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (21ಕ್ಕೆ 3) ಮಾರಕ ದಾಳಿ ನಡುವೆಯೂ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕಲು ವಿಫಲವಾದ ಭಾರತ ಮಹಿಳಾ ತಂಡ ಎರಡನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋಲನುಭವಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಭಾರತ ತಂಡ 0-1 ರಿಂದ ಹಿನ್ನಡೆ ಕಂಡಿತು. ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಕ್ಯಾರೆರಾ ಓವೆಲ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ಹರ್ಮಾನ್‌ಪ್ರೀತ್ ಕೌರ್ (28ರನ್, 20 ಎಸೆತ, 5 ಬೌಂಡರಿ) ಹಾಗೂ ಪೂಜಾ ವಸ್ತ್ರಾಕರ್ (37*ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 118 ರನ್ ಕಲೆಹಾಕಿತು. ಬಳಿಕ ಆಸ್ಟ್ರೇಲಿಯಾ ತಂಡ, ಆರಂಭಿಕ ಆಘಾತದ ನಡುವೆಯೂ ತಾಹ್ಲಿಯಾ ಮೆಕ್‌ಗ್ರಾತ್ (42*ರನ್, 33 ಎಸೆತ, 6 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 119 ರನ್‌ಗಳಿಸಿ ಜಯದ ನಗೆ ಬೀರಿತು.