ಕ್ಯಾನ್‌ಬೆರಾ: ಏಕದಿನ ಸರಣಿಯಲ್ಲಿ ನೀರಸ ನಿರ್ವಹಣೆಯಿಂದ ನಿರಾಸೆ ಅನುಭವಿಸಿರುವ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಆರಂಭವಾಗಲಿರುವ 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದ ಸಂಯೋಜನೆ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದಿದೆ. ಏಕದಿನ ಸರಣಿಯಲ್ಲಿ 1-2ರಿಂದ ಸೋಲಿನ ರುಚಿ ಕಂಡಿದ್ದ ವಿರಾಟ್ ಕೊಹ್ಲಿ ಬಳಗ ಎಚ್ಚರಿಕೆಯ ನಿರ್ವಹಣೆ ತೋರಬೇಕಾದ ಅಗತ್ಯವಿದೆ.
ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿದ್ದ ಟೀಮ್ ಇಂಡಿಯಾ, ಕ್ಯಾನ್‌ಬೆರಾದಲ್ಲೇ ನಡೆದ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ಮೂಲಕ ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಂಡಿತು. ಇದೀಗ ಅದೇ ನೆಲದಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಭಾರತ ತಂಡದ ಆಟಗಾರರು ಯುಎಇಯಲ್ಲಿ ನಡೆದ 13ನೇ ಐಪಿಎಲ್‌ನಲ್ಲಿ ತೋರಿದ ಉತ್ತಮ ನಿರ್ವಹಣೆಯನ್ನೇ ಆಸೀಸ್‌ನಲ್ಲೂ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.
ಏಕದಿನ ಸರಣಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್, ಶಿಖರ್ ಧವನ್ ಜತೆಗೂಡಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಲಯ ಕಂಡುಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಸ್ಫೋಟಿಸಲು ಸಜ್ಜಾಗಿದ್ದಾರೆ. ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಟಿ.ನಟರಾಜನ್ ಒಳಗೊಂಡ ಬೌಲಿಂಗ್ ಪಡೆ ಸಮತೋಲನದಿಂದ ಕೂಡಿದೆ. ಸನ್‌ರೈಸರ್ಸ್ ಪರ ಭರ್ಜರಿ ನಿರ್ವಹಣೆ ನೀಡಿದ್ದ ಟಿ.ನಟರಾಜನ್, ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಯಶ ಕಂಡಿದ್ದರು. ಇದೀಗ ನಟರಾಜನ್ ಮತ್ತೊಮ್ಮೆ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ್ದ ವಾಷಿಂಗ್ಟನ್ ಸುಂದರ್, ಪವರ್ ಪ್ಲೇ ಹಾಗೂ ಮಧ್ಯಮ ಓವರ್‌ಗಳಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ.
ಅಂತಿಮ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಟಿ20ಯಲ್ಲೂ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಬಲ್ಲರು. ಆವರ್ತನ ಪದ್ಧತಿ ಅನುಸರಿಸಿದರೆ ಮೊಹಮದ್ ಶಮಿ ಅಥವಾ ಜಸ್‌ಪ್ರೀತ್ ಬುಮ್ರಾ ಇಬ್ಬರಲ್ಲಿ ಒಬ್ಬರಷ್ಟೇ ಕಣಕ್ಕಿಳಿಯಲಿದ್ದಾರೆ.
*ಆಸೀಸ್‌ಗೆ ಗಾಯದ ಸಮಸ್ಯೆ
ಏಕದಿನ ಸರಣಿ ಜಯಿಸಿದ ವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅಲಭ್ಯತೆ ಕಂಡವನ್ನು ಕಾಡಲಿದೆ. ನಾಯಕ ಆರನ್ ಫಿಂಚ್ ಜತೆಗೆ ಆರಂಭಿಕರ ಆಯ್ಕೆಯೇ ಗೊಂದಲದ ಗೂಡಲಾಗಿದೆ. ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಲಭ್ಯತೆ ಇನ್ನು ಖಾತ್ರಿಯಾಗಿಲ್ಲ. ಅಲ್ಲದೆ, ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. ಏಕದಿನ ಸರಣಿಯಲ್ಲಿ ಆಡಿದ ತಂಡದಲ್ಲಿ ಕೆಲ ಬದಲಾವಣೆಯೊಂದಿಗೆ ಆಸೀಸ್ ಕಣಕ್ಕಿಳಿಯಲಿದೆ.
*ಟೀಮ್ ನ್ಯೂಸ್
ಭಾರತ: ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್-ಶಿಖರ್ ಧವನ್ ಜೋಡಿ ಇನಿಂಗ್ಸ್ ಆರಂಭಿಸಲಿದೆ. ಏಕದಿನ ಸರಣಿಯಲ್ಲಿ ಬೆಂಚು ಕಾಯಿಸಿದ್ದ ಮನೀಷ್ ಪಾಂಡೆ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಮೊಹಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಅವರಲ್ಲಿ ಒಬ್ಬರು ಕಣಕ್ಕಿಳಿಯಬಹುದು. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್ ಅಥವಾ ವಾಷಿಂಗ್ಟನ್ ಸುಂದರ್ ಆಡಬಹುದು. ದೀಪಕ್ ಚಹರ್, ಟಿ.ನಟರಾಜ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಭಾವ್ಯ ತಂಡ: ಕೆಎಲ್ ರಾಹುಲ್ (ವಿ.ಕೀ.), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದೀಪಕ್ ಚಹರ್, ವಾಷಿಂಗ್ಟನ್ ಸುಂದರ್/ಯಜುವೇಂದ್ರ ಚಾಹಲ್, ಟಿ. ನಟರಾಜನ್, ಮೊಹಮದ್ ಶಮಿ/ಜಸ್‌ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ: ಗಾಯಗೊಂಡಿರುವ ಡೇವಿಡ್ ವಾರ್ನರ್ ಬದಲಿಗೆ ಡಾರ್ಸಿ ಶಾರ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಆರಂಭಿಕರಾಗಿ ಮ್ಯಾಥ್ಯೂ ವೇಡ್ ನಾಯಕ ಫಿಂಚ್ ಜತೆಗೂಡಿ ಕಣಕ್ಕಿಳಿಯಬಹುದು. ಯಾಕೆಂದರೆ, ಕಳೆದ ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯಲ್ಲೂ ವಾರ್ನರ್‌ಗೆ ವಿಶ್ರಾಂತಿ ನೀಡಿದಾಗ ವೇಡ್ ಆಡಿದ್ದರು. ವೇಡ್ ಆಡಿದರೂ, ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಮುಂದುವರಿಯಬಹುದು. ಮಧ್ಯಮ ಕ್ರಮಾಂಕದಲ್ಲಿ ಗಾಯಾಳುಗಳಾದ ಸ್ಟೋಯಿನಿಸ್ ಮತ್ತು ಮಿಚೆಲ್ ಮಾರ್ಷ್ ಗೈರು ಇರುವುದು ಇದಕ್ಕೆ ಕಾರಣ. ಮಿಚೆಲ್ ಸ್ಟಾರ್ಕ್ ಗಾಯದಿಂದ ಚೇತರಿಕೆ ಕಾಣದಿದ್ದರೆ ಆಂಡ್ರೋ ಟೈ ಕಣಕ್ಕಿಳಿಬಹುದು.
ಸಂಭಾವ್ಯ ತಂಡ: ಆರನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್/ಡಾರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೋಯ್ಸಸ್ ಹೆನ್ರಿಕ್ಸ್, ಅಲೆಕ್ಸ್ ಕ್ಯಾರಿ (ವಿ.ಕೀ.), ಆಶ್ಟನ್ ಅಗರ್, ಮಿಚೆಲ್ ಸ್ಟಾರ್ಕ್/ಆಂಡ್ರೋ ಟೈ, ಸೀನ್ ಅಬೋಟ್, ಜೋಶ್ ಹ್ಯಾಸಲ್‌ವುಡ್, ಆಡಂ ಜಂಪಾ.
ಪಂದ್ಯ ಆರಂಭ: ಮಧ್ಯಾಹ್ನ 1.40
ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.
*ಪಿಚ್ ರಿಪೋರ್ಟ್
ಕ್ಯಾನ್‌ಬೆರಾ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್‌ಪ್ರವಾಹದ ನಿರೀಕ್ಷೆ ಇದೆ. 3ನೇ ಏಕದಿನ ಪಂದ್ಯದಲ್ಲಿ ಇದು ಸಾಬೀತಾಗಿತ್ತು. ಮನುಕಾ ಓವಲ್‌ನಲ್ಲಿ ನಡೆದಿರುವ ಬಿಗ್ ಬಾಷ್ ಲೀಗ್ ಟಿ20 ಪಂದ್ಯಗಳಲ್ಲಿ ಓವರ್‌ಗೆ 8.56ರ ಸರಾಸರಿಯಲ್ಲಿ ರನ್ ಹರಿದಿರುವ ದಾಖಲೆ ಇದೆ.
ಮುಖಾಮುಖಿ: 20
ಭಾರತ: 11
ಆಸ್ಟ್ರೇಲಿಯಾ: 8
ರದ್ದು: 1
ಆಸೀಸ್‌ನಲ್ಲಿ: 9
ಭಾರತ: 5
ಆಸ್ಟ್ರೇಲಿಯಾ: 3
ರದ್ದು: 1
*1: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ಯಾನ್‌ಬೆರಾದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಎದುರಾಗುತ್ತಿವೆ.
*50: ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿದರೆ 50ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಸಾಧನೆ ಮಾಡಲಿದ್ದಾರೆ.
*9: ಭಾರತ ತಂಡ 2019ರ ಡಿಸೆಂಬರ್ 8ರಿಂದ ಸತತ 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
*ಆಸೀಸ್‌ಗೂ ಹೊಸ ಜೆರ್ಸಿ
ಏಕದಿನ ಸರಣಿಯಲ್ಲಿ 1992ರ ವಿಶ್ವಕಪ್‌ನ ಕಡುನೀಲಿ ಜೆರ್ಸಿ ಧರಿಸಿದ್ದ ಟೀಮ್ ಇಂಡಿಯಾ, ಟಿ20ಯಲ್ಲೂ ಅದೇ ಜೆರ್ಸಿ ಉಳಿಸಿಕೊಳ್ಳಲಿದೆ. ಇತ್ತ ಆತಿಥೇಯ ಆಸ್ಟ್ರೇಲಿಯಾ ತಂಡ ಟಿ20 ಸರಣಿಯಲ್ಲಿ ಹೊಸ ವಿನ್ಯಾಸದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಮೂಲನಿವಾಸಿಗಳಿಗೆ ಗೌರವ ಸೂಚಿಸುವಂಥ ಜೆರ್ಸಿಯೊಂದಿಗೆ ಆಸೀಸ್ ತಂಡ ಆಡಲಿದೆ.
ರ‌್ಯಾಂಕಿಂಗ್ ಲೆಕ್ಕಾಚಾರ
ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸುವುದರೊಂದಿಗೆ ಆಸೀಸ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ ವಿರುದ್ಧ ಸರಣಿ ಗೆದ್ದರೆ ಆಸೀಸ್ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ 3ನೇ ಸ್ಥಾನದಲ್ಲಿರುವ ಭಾರತ ತಂಡ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿದರೆ 2ನೇ ಸ್ಥಾನಕ್ಕೇರಬಹುದಾಗಿದೆ.