ಕ್ರೀಡೆ

ಭಾರತಕ್ಕಿಂದು ಅಫ್ಘಾನಿಸ್ತಾನ ಸವಾಲು ; ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಕೊಹ್ಲಿ ಬಳಗ

ಅಬುಧಾಬಿ: ಸತತ ಎರಡೂ ಸೋಲನುಭವಿಸಿ ಈಗಾಗಲೇ ಸೆಮೀಸ್ ಹಾದಿಯಿಂದ ಬಹುದೂರ ಉಳಿದಿರುವ ಮಾಜಿ ಚಾಂಪಿಯನ್ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮಾಡು ಇಲ್ಲವೇ ಮಡಿ ಕದನದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬುಧವಾರ ಎದುರಿಸಲಿದೆ. ಫಲಿತಾಂಶದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ‘ಟಾಸ್’ ಗೆಲುವು ಕೂಡ ಕೊಹ್ಲಿಗೆ ಅನಿವಾರ್ಯವಾಗಿದೆ. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಕದನದಲ್ಲಿ ಭಾರತ ಗೆದ್ದರೂ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಕಂಡಿರುವ ಭಾರತ ತಂಡದ ಸೆಮೀಸ್ ಹಾದಿ ಬಹುತೇಕ ಕಮರಿದ್ದರೂ ಕೂದಲೆಳೆ ಅವಕಾಶ ಹೊಂದಿದೆ. ಅದು ಕೂಡ ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಭಿತವಾಗಿದೆ. ತಂಡದ ಸಂಯೋಜನೆಯಲ್ಲಿ ಸಾಕಷ್ಟು ಎಡವುತ್ತಿರುವ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಿಗದಿತ ಓವರ್‌ಗಳ ಪಂದ್ಯದಿಂದ ದೂರ ಉಳಿದಿರುವ ಆರ್.ಅಶ್ವಿನ್ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

* ಅಶ್ವಿನ್ ಆಯ್ಕೆಯೇ ಚರ್ಚೆ

ಟೀಮ್ ಇಂಡಿಯಾ ಆಡಳಿತ ಮಂಡಳಿಯ ಅವಕೃಪೆಗೆ ಒಳಗಾಗುತ್ತಿರುವ ಆರ್.ಅಶ್ವಿನ್ ಅವರನ್ನು ಕಳೆದ ಪಂದ್ಯದಲ್ಲಿ ಆಡಿಸದಿದ್ದಕ್ಕೆ ಮಾಜಿ ಕ್ರಿಕೆಟಿಗರಿಂದ ಟೀಕಾ ಪ್ರಹಾರವೇ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಸರದಾರನಾಗಿರುವ ಚೆನ್ನೈ ಬೌಲರ್ ಅನ್ನು ಕಡೆಗಣಿಸುತ್ತಿರುವುದಕ್ಕೆ ಕೊಹ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್‌ನಲ್ಲಿ ಮಿಸ್ಟ್ರಿ ಬೌಲರ್ ಎನಿಸಿಕೊಂಡಿದ್ದ ಫಲವಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ವರುಣ್ ಚಕ್ರವರ್ತಿ, ಸಿಕ್ಕ ಎರಡೂ ಅವಕಾಶಗಳನ್ನು ಕೈಚೆಲ್ಲಿದ್ದಾರೆ. ವರುಣ್ ಚಕ್ರವರ್ತಿ ಬದಲಿಗೆ ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ತಂಡಕ್ಕೆ ಅಶ್ವಿನ್ ಸೇವೆ ತಂಡಕ್ಕೆ ಅವಶ್ಯತೆಯಿದೆ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಜವಾಬ್ದಾರಿಯುವ ನಿರ್ವಹಣೆ ತೋರಬೇಕಿದೆ. ಬಲಿಷ್ಠ ಬೌಲರ್‌ಗಳಿಂದಲೇ ಕೂಡಿರುವ ಅ್ಘನ್ ತಂಡವನ್ನು ಎದುರಿಸಲು ಬ್ಯಾಟರ್‌ಗಳಿಂದ ಎಚ್ಚರಿಕೆಯ ಪ್ರದರ್ಶನ ಅಗತ್ಯ. ಬೌಲರ್‌ಗಳ ಮೇಲೆ ಒತ್ತಡ ಕಡಿಮೆಯಾಗಬೇಕೆಂದರೆ ಬ್ಯಾಟರ್‌ಗಳು ಕನಿಷ್ಠ ಸ್ಪರ್ಧಾತ್ಮಕ ಮೊತ್ತವನ್ನಾದರೂ ಪೇರಿಸಬೇಕಿದೆ. ಹಿಂದಿನ ಎರಡೂ ಹಣಾಹಣಿಯಲ್ಲೂ ನೀರಸ ನಿರ್ವಹಣೆ ತೋರಿರುವ ಬ್ಯಾಟಿಂಗ್ ಪಡೆ ಪುಟಿದೇಳಬೇಕಿದೆ.

* ಆತ್ಮವಿಶ್ವಾಸದಲ್ಲಿ ಅಫ್ಘಾನಿಸ್ತಾನ

ಇದುವರೆಗೂ ಆಡಿರುವ 3 ಪಂದ್ಯಗಳಿಂದ 4 ಅಂಕ ಕಲೆಹಾಕಿರುವ ಆ್ಘನ್ ತಂಡ ಸೆಮೀಸ್‌ಗೇರುವ ಅವಕಾಶ ಹೊಂದಿದ್ದು, ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಪಾಕಿಸ್ತಾನ ಎದುರು ಗೆಲುವಿಗಾಗಿ ಹೋರಾಡಿದ್ದ ಆ್ಘನ್, ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯ ತಂಡಗಳ ಎದುರು ಭರ್ಜರಿ ಜಯ ದಾಖಲಿಸಿತ್ತು. ಅಂಕಪಟ್ಟಿಯ ಎರಡನೇ ಗುಂಪಿನಲ್ಲಿ ಪ್ರಬಲ ಪೈಪೋಟಿ ತೋರುತ್ತಿರುವ ಮೊಹಮದ್ ನಬಿ ಸಾರಥ್ಯದ ಅಫ್ಘಾನಿಸ್ತಾನ ತಂಡ ಭಾರತ ತಂಡಕ್ಕೆ ಕಂಟಕವಾದರೂ ಅಚ್ಚರಿಯಿಲ್ಲ.

ಟೀಮ್ ನ್ಯೂಸ್:

ಭಾರತ: ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಿದರೆ ಕನ್ನಡಿಗ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬರಬಹುದು. ಸೂರ್ಯಕುಮಾರ್ ಫಿಟ್ನೆಸ್ ಇದುವರೆಗೂ ಖಚಿತವಾಗಿಲ್ಲ. ಹೀಗಾಗಿ ಇಶಾನ್ ಕಿಶನ್ ಮತ್ತೊಮ್ಮೆ ಇನಿಂಗ್ಸ್ ಆರಂಭಿಸುವರು. ಅನುಭವಿ ಅಶ್ವಿನ್‌ಗೆ ಮಣೆ ಹಾಕಿದರೆ, ವರುಣ್ ಹೊರಗುಳಿಯುವರು.

ಅಫ್ಘಾನಿಸ್ತಾನ: ಅಸ್ಗರ್ ಆಫ್ಘನ್ ನಿವೃತ್ತಿಯಿಂದಾಗಿ ತೆರವಾದ ಸ್ಥಾನಕ್ಕೆ ಹಸ್ಮತುಲ್ಲಾ ಶಾಹಿದಿ ಅಥವಾ ಉಸ್ಮಾನ್ ಘಾನಿ ಕಣಕ್ಕಿಳಿಯಬಹುದು.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ಮುಖಾಮುಖಿ: 2, ಭಾರತ: 2, ಅಫ್ಘಾನಿಸ್ತಾನ: 0,

ಟಿ20 ವಿಶ್ವಕಪ್‌ನಲ್ಲಿ: 2, ಭಾರತ: 2, ಅಫ್ಘಾನಿಸ್ತಾನ: 0, 

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

* ನ್ಯೂಜಿಲೆಂಡ್-ಸ್ಕಾಟ್ಲೆಂಡ್ ಮುಖಾಮುಖಿ

ದಿನದ ಮತ್ತೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳು ದುಬೈನಲ್ಲಿ ಎದುರಾಗಲಿವೆ. ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಕಿವೀಸ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಪಾಕ್ ಎದುರು ಸೋಲನುಭವಿಸಿದ ಬಳಿಕ ಭಾರತ ತಂಡದ ಎದುರು ಭರ್ಜರಿ ಗೆಲುವು ದಾಖಲಿಸಿರುವ ಕೇನ್ ವಿಲಿಯಮ್ಸನ್ ಬಳಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ