ದುಬೈ: ಬೇರೆ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಭವಿಷ್ಯ ನಿರ್ಧಾರವಾಗಲಿರುವ ಸಂಕಟದ ನಡುವೆಯೂ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಲಯ ಕಾಯ್ದುಕೊಳ್ಳಲು ಸಜ್ಜಾಗಿದೆ. ಅಫ್ಘಾನಿಸ್ತಾನ ವಿರುದ್ಧ ಗೆಲುವಿನ ಖಾತೆ ತೆರೆದಿರುವ ಟೀಮ್ ಇಂಡಿಯಾ, ಸ್ಕಾಟ್ಲೆಂಡ್ ವಿರುದ್ಧ ಶುಕ್ರವಾರ ಸೆಣಸಲಿದೆ. ಈ ಪಂದ್ಯದಲ್ಲಿ ಭಾರಿ ಅಂತರದಿಂದ ಜಯಿಸುವ ಮೂಲಕ ವಿರಾಟ್ ಕೊಹ್ಲಿ ಸೆಮಿಫೈನಲ್ ಆಸೆ ಜೀವಂತವಿಡಲು ಹೋರಾಡಲಿದೆ.
ಭಾರತ ತಂಡ ತನ್ನ ಉಳಿದೆರಡು ಲೀಗ್ ಪಂದ್ಯಗಳನ್ನು ಜಯಿಸಿದರೂ, ನ್ಯೂಜಿಲೆಂಡ್ ಮತ್ತು ಅ್ಘಾನಿಸ್ತಾನ ನಡುವೆ ಭಾನುವಾರ ನಡೆಯಲಿರುವ ಪಂದ್ಯದ ಫಲಿತಾಂಶವೇ ಟೀಮ್ ಇಂಡಿಯಾದ ಭವಿಷ್ಯ ನಿರ್ಧರಿಸಲಿದೆ. ಒಂದು ವೇಳೆ ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದು ವರದಾನ ಕಲ್ಪಿಸಿದರೆ, ಆಗ ರನ್‌ರೇಟ್ ಲೆಕ್ಕಾಚಾರ ಮಹತ್ವದ ಪಾತ್ರ ನಿರ್ವಹಿಸಲಿದೆ. ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧ ಬೃಹತ್ ಅಂತರದಿಂದ ಗೆಲುವು ದಾಖಲಿಸುವತ್ತ ಟೀಮ್ ಇಂಡಿಯಾ ದೃಷ್ಟಿ ನೆಟ್ಟಿದೆ. ಮತ್ತೊಂದು ಕ್ರಿಕೆಟ್ ಶಿಶು ದೇಶ ನಮೀಬಿಯಾ ತಂಡ ಶುಕ್ರವಾರ ನ್ಯೂಜಿಲೆಂಡ್‌ಗೆ ಆಘಾತ ನೀಡಿದರೂ, ಭಾರತಕ್ಕೆ ಅದು ವರವಾಗಿ ಪರಿಣಮಿಸಲಿದೆ.
ಸೂಪರ್-12ರ ಗ್ರೂಪ್-2ರಿಂದ ಈಗಾಗಲೆ ಪಾಕ್ ತಂಡ ಸತತ 4 ಜಯದೊಂದಿಗೆ ಸೆಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದರೆ, ಸದ್ಯಕ್ಕೆ ನ್ಯೂಜಿಲೆಂಡ್ ತಂಡವೇ ಸೆಮೀಸ್‌ಗೇರುವ 2ನೇ ನೆಚ್ಚಿನ ತಂಡವಾಗಿದೆ. ಆದರೆ ಕಿವೀಸ್ ಕೊನೇ 2 ಪಂದ್ಯಗಳ ಪೈಕಿ ಒಂದರಲ್ಲಿ ಸೋತರೆ ಆಗ ಭಾರತಕ್ಕೂ ಸೆಮಿಫೈನಲ್‌ಗೇರುವ ಬಾಗಿಲು ತೆರೆಯಲಿದೆ.
*ಪಂದ್ಯ ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ವಿಶ್ವಾಸದಲ್ಲಿ ಟೀಮ್ ಇಂಡಿಯಾ
ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಮಾಡಿದ ತಪ್ಪುಗಳಿಂದ ಪಾಠ ಕಲಿತಂತೆ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಸರ್ವಾಂಗೀಣ ನಿರ್ವಹಣೆಯೊಂದಿಗೆ ಪುಟಿದೆದ್ದಿದೆ. ಉತ್ತಮ ಆರಂಭ ಪಡೆಯುವ ಜತೆಗೆ ವಿಕೆಟ್ ಬೇಟೆಯಲ್ಲೂ ಬೌಲರ್‌ಗಳು ಮಿಂಚಿದರು. ಹೀಗಾಗಿ ಸ್ಕಾಟ್ಲೆಂಡ್ ವಿರುದ್ಧ ಭಾರತ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆದರೆ ತಂಡದ ಮಧ್ಯಮ ಕ್ರಮಾಂಕದ ಸತ್ವಪರೀಕ್ಷೆ ಇನ್ನೂ ಬಾಕಿ ಇದೆ. ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ 4 ವರ್ಷಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದರೂ, ಅತ್ಯುತ್ತಮ ಸ್ಪೆಲ್ ಮೂಲಕ ಮಿಂಚಿದರು. ಇದರೊಂದಿಗೆ ಭಾರತ ತಂಡ ಬಲಿಷ್ಠ ಆಡುವ 11ರ ಬಳಗವನ್ನು ಕಂಡುಕೊಂಡಂತಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪೈಪೋಟಿ ನೀಡಿರುವ ಸ್ಕಾಟ್ಲೆಂಡ್ ತಂಡವನ್ನು ಭಾರತ ಲಘುವಾಗಿ ಪರಿಗಣಿಸಬಾರದು.
ಟೀಮ್ ನ್ಯೂಸ್
ಭಾರತ: ವರುಣ್ ಚಕ್ರವರ್ತಿ ಗಾಯಗೊಂಡ ಕಾರಣ ಆ್ಘನ್ ವಿರುದ್ಧ ಕಣಕ್ಕಿಳಿದಿದ್ದ ಅಶ್ವಿನ್, ಇನ್ನು ತಂಡದಲ್ಲಿ ಕಾಯಂ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗದಲ್ಲೂ ಈ ಬಾರಿ ಬದಲಾವಣೆ ಸಾಧ್ಯತೆ ಇಲ್ಲ.
ಸ್ಕಾಟ್ಲೆಂಡ್: ಗಾಯದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಆಲ್ರೌಂಡರ್ ಜೋಶ್ ಡೇವಿ ಇನ್ನೂ ಪೂರ್ಣ ಫಿಟ್ ಆಗಿಲ್ಲ. ಇದರಿಂದಾಗಿ ಕಿವೀಸ್ ವಿರುದ್ಧ ಆಡಿದ 11ರ ಬಳಗದಲ್ಲಿ ಬದಲಾವಣೆ ಅನುಮಾನವೆನಿಸಿದೆ.
ಮೊದಲ ಮುಖಾಮುಖಿ
ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ ಇದು ಮೊದಲ ಟಿ20 ಪಂದ್ಯವಾಗಿದೆ. ಈ ಮುನ್ನ 2007ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ನಡೆಯಬೇಕಾಗಿತ್ತು. ಆದರೆ ಆ ಪಂದ್ಯ ಭಾರಿ ಮಳೆಯಿಂದಾಗಿ ಟಾಸ್ ನಂತರ ರದ್ದುಗೊಂಡಿತ್ತು.
ಕೊಹ್ಲಿಗೆ ಬರ್ತ್‌ಡೇ ಗಿಫ್ಟ್ ನಿರೀಕ್ಷೆ
ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನತೆಗೆ ಗೆಲುವಿನ ಉಡುಗೊರೆ ನೀಡುವ ಜತೆಗೆ ನಾಯಕ ವಿರಾಟ್ ಕೊಹ್ಲಿಗೆ ಜನ್ಮದಿನವನ್ನು ವಿಶೇಷವಾಗಿಸುವ ಅವಕಾಶವೂ ಟೀಮ್ ಇಂಡಿಯಾ ಆಟಗಾರರ ಮುಂದಿದೆ. ಕೊಹ್ಲಿ ಶುಕ್ರವಾರ 33ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಕಿವೀಸ್‌ಗೆ ನಮೀಬಿಯ ಎದುರಾಳಿ
ಗ್ರೂಪ್-2ರಿಂದ 2ನೇ ತಂಡವಾಗಿ ಸೆಮಿಫೈನಲ್‌ಗೇರುವ ತವಕದಲ್ಲಿರುವ ನ್ಯೂಜಿಲೆಂಡ್ ತಂಡ ಶಾರ್ಜಾದಲ್ಲಿ ಶುಕ್ರವಾರದ ಮೊದಲ ಪಂದ್ಯದಲ್ಲಿ ನಮೀಬಿಯ ತಂಡವನ್ನು ಎದುರಿಸಲಿದೆ. ಸ್ಕಾಟ್ಲೆಂಡ್ ವಿರುದ್ಧ ಆಘಾತ ಎದುರಾಗುವುದರಿಂದ ಪಾರಾಗಿರುವ ಕಿವೀಸ್, ಆಡಿದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲೇ 2ನೇ ಸುತ್ತಿಗೇರಿ ಗಮನ ಸೆಳೆದಿರುವ ನಮೀಬಿಯ ವಿರುದ್ಧವೂ ಎಚ್ಚರಿಕೆಯ ಆಟವಾಡಬೇಕಾಗಿದೆ. ನಂತರ ಆಫ್ಘನ್ ವಿರುದ್ಧವೂ ಗೆದ್ದರೆ ಸುಲಭವಾಗಿ ಉಪಾಂತ್ಯಕ್ಕೇರುವ ಅವಕಾಶ ಕೇನ್ ವಿಲಿಯಮ್ಸನ್ ಬಳಗದ ಮುಂದಿದೆ. ಕಿವೀಸ್ ಸೋಲಿಗಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸುತ್ತಿರುವ ನಡುವೆ, ವಿಲಿಯಮ್ಸನ್ ಪಡೆ ತನ್ನ ಹಾದಿಯನ್ನು ತಾನೇ ದುರ್ಗಮಗೊಳಿಸದಂತೆ ಗಮನವಿಡಲಿದೆ. ಉಭಯ ತಂಡಗಳ ನಡುವಿನ ಚೊಚ್ಚಲ ಟಿ20 ಮುಖಾಮುಖಿ ಇದಾಗಿದೆ.
*ಪಂದ್ಯ ಆರಂಭ: ಮಧ್ಯಾಹ್ನ 3.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್