ಲೌಸನ್ನೆ: ಭಾರತದೊಂದಿಗೆ ಜರ್ಮನಿ, ಕತಾರ್, ಟರ್ಕಿ ಸಹಿತ 7 ದೇಶಗಳು 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಆಸಕ್ತಿ ತೋರಿಸಿವೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮಂಗಳವಾರ ತಿಳಿಸಿದೆ. ಜತೆಗೆ ಮುಂದಿನ ತಿಂಗಳು ಐಒಸಿಯ "ಭವಿಷ್ಯದ ಆತಿಥೇಯ ಆಯೋಗ'ದ ಎದುರು ಕ್ರೀಡಾಕೂಟದ ಯೋಜನೆಗಳ ವಿವರವನ್ನು ಮಂಡಿಸುವಂತೆ ಈ ದೇಶಗಳನ್ನು ಆಹ್ವಾನಿಸಿದೆ.
ಕ್ರೀಡಾಕೂಟದ ಸ್ಥಳದ ಸಮಗ್ರ ಯೋಜನೆ (ಮಾಸ್ಟರ್ ಪ್ಲ್ಯಾನ್) ಮತ್ತು ಕ್ರೀಡಾಪಟುಗಳಿಗೆ ಒದಗಿಸುವ ವ್ಯವಸ್ಥೆ, ಆರ್ಥಿಕ ಸಂಪನ್ಮೂಲಗಳ ಕ್ರೋಢಿಕರಣದ ತಂತ್ರ, ರಾಜಕೀಯ ಮತ್ತು ಸಾರ್ವಜನಿಕ ಬೆಂಬಲ, ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಡುವ ಸಾಮರ್ಥ್ಯ ಮತ್ತು ಆತಿಥೇಯ ದೇಶದ ಜನರಿಗೆ ದೀರ್ಕಾಲೀನ ಪ್ರಯೋಜನಗಳನ್ನು ಕಲ್ಪಿಸುವ ದೂರಗಾಮಿ ಯೋಜನೆ ಮುಂತಾದ ತಾಂತ್ರಿಕ ಅಂಶಗಳ ಆಧಾರದ ಮೇಲೆ ಈ ಯೋಜನೆಗಳನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಐಒಸಿ ತಿಳಿಸಿದೆ. ದಣ ಕೊರಿಯಾ, ದ. ಆಫ್ರಿಕಾ ಮತ್ತು ಹಂಗೆರಿ 2036ರ ಒಲಿಂಪಿಕ್ಸ್ ಆಯೋಜಿಸುವ ಆಸಕ್ತಿಯನ್ನು ವ್ಯಕ್ತಪಡಿಸಿ ಐಒಸಿ ಜತೆಗೆ ನಿರಂತರ ಮಾತುಕತೆಯಲ್ಲಿರುವ ಇತರ ಮೂರು ದೇಶಗಳಾಗಿವೆ. ಇನ್ನೂ ಕೆಲ ದೇಶಗಳು 2036ರ ನಂತರ ಒಲಿಂಪಿಕ್ಸ್ ಆವೃತ್ತಿಗಳನ್ನು ಆಯೋಜಿಸುವ ಕುರಿತಾಗಿಯೂ ಐಒಸಿ ಜತೆಗೆ ಮಾತಕತೆಯಲ್ಲಿ ತೊಡಗಿಕೊಂಡಿವೆ. ಅಕ್ಟೋಬರ್ 31ರ ನಂತರ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಬೇರೆ ಯಾವುದೇ ಆಸಕ್ತ ದೇಶಗಳನ್ನು ಪರಿಗಣಿಸಲಾಗುವುದಿಲ್ಲ ಎಂದೂ ತಿಳಿಸಲಾಗಿದೆ.
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಆತಿಥ್ಯದ ರೇಸ್ನಲ್ಲಿ ಕಾಣಿಸಿಕೊಂಡಿರುವ ಭಾರತ, ಗುಜರಾತ್ನ ಅಹಮದಾಬಾದ್ ನಗರದಲ್ಲಿ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸುವ ಯೋಜನೆ ಹೊಂದಿದೆ. ಈ ಸಂಬಂಧ ಈಗಾಗಲೆ ಪ್ರಾಥಮಿಕ ಆಸಕ್ತಿಯ ಅಭಿವ್ಯಕ್ತಿಯನ್ನು ಸಲ್ಲಿಸಿದೆ.
2029ರಲ್ಲಿ ಅಂತಿಮ ನಿರ್ಧಾರ
2036ರ ಒಲಿಂಪಿಕ್ಸ್ ಆತಿಥ್ಯದ ಬಗ್ಗೆ 2029ರ ಮಧ್ಯಭಾಗದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಲಿಂಪಿಕ್ಸ್ ಆತಿಥ್ಯದ ಮಾತುಕತೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯದ ಬೆಂಬಲದೊಂದಿಗೆ ಗುಜರಾತ್ ಸರ್ಕಾರದ ಸಹಯೋಗದಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು (ಐಒಎ) ನೇತೃತ್ವ ವಹಿಸಿಕೊಳ್ಳಲಿದೆ. ನವೆಂಬರ್ನಲ್ಲಿ ಯೋಜನೆಗಳ ವಿವರ ಸಲ್ಲಿಸುವುದು ಆರಂಭಿಕ ಹಂತ ಮಾತ್ರ ಆಗಿರಲಿದೆ. ಆತಿಥ್ಯ ನಿರ್ಧಾರದ ಅಂತಿಮ ಹಂತ 2028ರಲ್ಲಿ ಆರಂಭಗೊಳ್ಳಲಿದೆ. ಬಳಿಕ 2029ರ ಮಧ್ಯಭಾಗದಲ್ಲಿ ಐಒಸಿ ಕಾರ್ಯಕಾರಿ ಮಂಡಳಿಯು "ಆದ್ಯತೆಯ ಆತಿಥೇಯ' ದೇಶವನ್ನು ಆಯ್ಕೆ ಮಾಡಲಿದೆ. ಈ ದೇಶಕ್ಕೆ 2036ರ ಒಲಿಂಪಿಕ್ಸ್ ಆತಿಥ್ಯ ನೀಡುವ ಬಗ್ಗೆ ಐಒಸಿ ಅಧಿವೇಶನದಲ್ಲಿ ಮತದಾನದ ಮೂಲಕ ಅಂತಿಮವಾಗಿ ನಿರ್ಧರಿಸಲಾಗುತ್ತದೆ.