ಕ್ರೀಡೆ

IND vs ZIM T20: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ; ಸರಣಿಯಲ್ಲಿ 1-2 ಮುನ್ನಡೆ

ಹರಾರೆ: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 23 ರನ್ ಅಂತರದ ಗೆಲುವು ಸಾಧಿಸಿದೆ.

ಇದರೊಂದಿಗೆ ಆತಿಥೇಯ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದ ಮುನ್ನಡೆ ಗಳಿಸಿದೆ. ಟೀಂ ಇಂಡಿಯಾ ಹರಾರೆಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಎರಡನೇ ಟಿ20ಯಲ್ಲಿ 100 ರನ್‌ಗಳ ಜಯ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಮೂರನೇ ಟಿ20ಯಲ್ಲೂ ಜಿಂಬಾಬ್ವೆಯನ್ನು ಮಣಿಸಿದೆ.

ಹರಾರೆಯ ಸ್ಪೋರ್ಟ್ ಕ್ಲಬ್​ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಯಾವ ಹಂತದಲ್ಲೂ ಪೈಪೋಟಿ ಒಡ್ಡಲಿಲ್ಲ. ಅಲ್ಲದೆ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 159 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಟಿ20 ಸರಣಿಯ ಮುಂದಿನ ಪಂದ್ಯ ಶನಿವಾರ ನಡೆಯಲಿದೆ.

ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಔಟಾಗದೇ 65 ರನ್‌ (49 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಸಿಡಿಸಿದರೆ ಕ್ಲೈವ್ ಮದಂಡೆ 37 ರನ್‌ (26 ಎಸೆತ, 2 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು. ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌, ಅವೇಶ್‌ ಖಾನ್‌ 2 , ಖಲೀಲ್‌ ಅಹ್ಮದ್‌ ತಲಾ ಒಂದು ವಿಕೆಟ್‌ ಪಡೆದರು.

ಟೀಂ ಇಂಡಿಯಾ ಪರ ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ಶುಭಮನ್‌ ಗಿಲ್‌ 67 ರನ್‌ ಜೊತೆಯಾಟವಾಡಿದರು. ಜೈಸ್ವಾಲ್‌ 36 ರನ್‌(27 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ ಶುಭಮನ್‌ ಗಿಲ್‌ 66 ರನ್‌(49 ಎಸೆತ, 7 ಬೌಂಡರಿ, 3 ಸಿಕ್ಸ್‌) ಗಾಯಕ್‌ವಾಡ್‌ 49 ರನ್‌ (28 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಔಟಾದರು.

ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್ಬಾನಿ ಹಾಗೂ ಸಿಕಂದರ್ ರಾಜಾ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.