IND vs WI T20: ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯದ ಮೊದಲ ಇನ್ನಿಂಗ್ಸ್ ಇದೀಗ ಮುಕ್ತಾಯಗೊಂಡಿದೆ.
ಮಳೆ ಸುರಿದ ಹಿನ್ನೆಲೆ 9 ಓವರ್ಗೆ ಪಂದ್ಯವನ್ನು ಸೀಮಿತಗೊಳಿಸಿದ ಬೆನ್ನಲ್ಲೇ ಟಾಸ್ ಗೆದ್ದು ವಿಂಡೀಸ್ ಪಡೆ ಬೌಲಿಂಗ್ ಆಯ್ದುಕೊಂಡಿತು. ತವರಿನ ಪಿಚ್ನಲ್ಲಿ ಅಬ್ಬರಿಸಲು ಕಣಕ್ಕಿಳಿದ ಆರಂಭಿಕರಾದ ಅಭಿಷೇಕ್ ಶರ್ಮಾ ಬಹುಬೇಗನೇ ಪೆವಿಲಿಯನ್ ಹಾದಿ ಹಿಡಿದರೆ, ಸಂಜು 16 ರನ್ ಗಳಿಸಿ ಔಟ್ ಆದರು. ಆದರೆ, ಕ್ರೀಸ್ಗೆ ಅಂಟಿ ನಿಂತ ಇಶಾನ್ ಕಿಶನ್, ಕೇವಲ 10 ಎಸೆತದಲ್ಲಿ ಸ್ಫೋಟಕ 30 ರನ್ (3 ಬೌಂಡರಿ, 2 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು.
ಕಿಶನ್ರ ಅಬ್ಬರದ ಬ್ಯಾಟಿಂಗ್ನಿಂದ ಮೊದಲ 2ನೇ ಓವರ್ಗೆ ತಂಡವು 40 ರನ್ಗಳ ಗಡಿಯನ್ನು ಸುಲಭವಾಗಿ ತಲುಪಿತು. ಆ ನಂತರ ಬಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, 22 ರನ್ ಬಾರಿಸಿ ಔಟ್ ಆದರೆ, ಕ್ರೀಸ್ಗೆ ಬಂದ ಮೊದಲ ಬಾಲ್ನಿಂದಲೇ ಸಿಕ್ಸರ್ ಹೊಡೆದ ನಮನ್ ಧಿರ್, ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಈ ಸಮಯದಲ್ಲೇ ಮಳೆ ಸುರಿದ ಪರಿಣಾಮ ಪಂದ್ಯವನ್ನು ಕೊನೆಗೂ ರದ್ದುಗೊಳಿಸಲಾಯಿತು. 2-2 ಅಂತರದ ಹಿನ್ನೆಲೆ, ಇದೀಗ ಎರಡೂ ತಂಡಳಿಗೂ ಟಿ20 ಸರಣಿಯ ಟ್ರೋಫಿಯನ್ನು ಹಂಚಿಕೆ ಮಾಡಲಾಗಿದೆ.
ಈ ಹಿಂದೆಯೇ ತಿಳಿಸಿದಂತೆ, ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಮಳೆ ಕೊಂಚ ಬಿಡುವು ನೀಡಿದರೆ, ಬೇಗನೇ ಫೀಲ್ಡ್ ಸಿದ್ಧಪಡಿಸಿಕೊಂಡರೆ, ಕಡಿಮೆ ಓವರ್ಗಳಲ್ಲಿ ಸರಣಿ ವಿಜೇತರನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಪಡೆಯ ಬೌಲರ್ಗಳಿಗೆ ಬೆವರಿಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದ್ದೇ ಆದರೂ ವರುಣನು ಕೃಪೆ ತೋರದ ಕಾರಣ, ಪಂದ್ಯ ಕಡೆಗೂ ರದ್ದಾಗಿ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡಿ, ಟ್ರೋಫಿಯನ್ನು ನೀಡಲಾಗಿದೆ.