ನವದೆಹಲಿ: ಎಲ್ಲರ ನಿರೀಕ್ಷೆಯಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ (ಜುಲೈ 09) ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಅಧಿಕೃತವಾಗಿ ಘೋಷಣೆ ಮಾಡಿದರು. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ನಡೆಯಲಿದ್ದು, ಈ ವೇಳೆ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಮೊದಲ ಸರಣಿಯಲ್ಲಿಯೇ ಕೋಚ್ ಆಗಿ ತಮ್ಮ ಛಾಪು ತೋರಿಸಲು ಗಂಭೀರ್ ಬಯಸಿದ್ದಾರೆ. ತಂಡದ ಆಯ್ಕೆಯಿಂದಲೇ ಗಂಭೀರ್ ಕೆಲಸ ಶುರುವಾಗಲಿದೆಯಂತೆ. ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಗೊತ್ತೇ ಇದೆ. ಇವರೊಂದಿಗೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೂಡ ಟಿ20ಗೆ ವಿದಾಯ ಹೇಳಿದ್ದಾರೆ.
ಈ ಮೂವರು ಸ್ಟಾರ್ ಕ್ರಿಕೆಟಿಗರು ನಿವೃತ್ತಿ ಘೋಷಿಸುತ್ತಿದ್ದಂತೆ ಹೊಸ ಟಿ20 ತಂಡ ಕಟ್ಟುವ ಜವಾಬ್ದಾರಿ ಹೊಸ ಕೋಚ್ ಮೇಲೆ ಬಿದ್ದಿದೆ. ಇದಲ್ಲದೆ, ತಂಡಕ್ಕೆ ನಾಯಕನನ್ನು ಸಹ ನೇಮಿಸಬೇಕು. ಇಂತಹ ಪ್ರಮುಖ ಅಂಶಗಳ ಕುರಿತು ಗಂಭೀರ್ ತಮ್ಮ ಸಲಹೆಗಳನ್ನು ಆಯ್ಕೆ ಸಮಿತಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಹೊಸ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಏಕದಿನ ಸರಣಿಗೂ ನಾಯಕನ ಆಯ್ಕೆ ನಿರ್ಣಾಯಕವಾಗಿದೆ. ಮೊದಲ ಸರಣಿಯಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಗಂಭೀರ್ ಬಹಳ ಚುರುಕಾಗಿ ಪರಿಹರಿಸುತ್ತಿದ್ದಾರೆ ಎಂದು ತೋರುತ್ತದೆ. ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್‌ಗೆ ನಾಯಕತ್ವ ವಹಿಸುವಂತೆ ಗಂಭೀರ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ ಎಂದು ಕ್ರೀಡಾ ಮೂಲಗಳು ತಿಳಿಸಿವೆ.
ಬಿಸಿಸಿಐ ಕೂಡ ಇಬ್ಬರನ್ನು ಫೈನಲ್ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ, ಟಿ20 ಸ್ವರೂಪಕ್ಕಾಗಿ ಕೋರ್ ತಂಡವನ್ನು ನಿರ್ಮಿಸಲು ಬೃಹತ್ ಬದಲಾವಣೆಗಳೊಂದಿಗೆ ಟಿ20 ತಂಡವನ್ನು ಶುದ್ಧೀಕರಿಸಲು ಗಂಭೀರ್ ಯೋಚಿಸುತ್ತಿದ್ದಾರೆ. ಬಿಸಿಸಿಐ, ಆಯ್ಕೆದಾರರು ಮತ್ತು ಮುಖ್ಯ ಕೋಚ್ ಗಂಭೀರ್ ನಡುವಿನ ಚರ್ಚೆಯ ಬಳಿಕ ಈ ವಾರದ ಕೊನೆಯಲ್ಲಿ ಶ್ರೀಲಂಕಾ ಪ್ರವಾಸಕ್ಕಾಗಿ ಟಿ20 ಮತ್ತು ಏಕದಿನ ತಂಡಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಅಂದಹಾಗೆ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಇದೇ ತಿಂಗಳ 27 ರಿಂದ ಆರಂಭವಾಗಲಿದೆ. ಸದ್ಯ ರೋಹಿತ್, ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಗಂಭೀರ್ ಕೋಚ್ ಅಡಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಸೈಡ್ಲೈನ್ ಆಗುವ ಆತಂಕವು ಕೂಡ ಅಭಿಮಾನಿಗಳಲ್ಲಿ ಎದುರಾಗಿದೆ. (ಏಜೆನ್ಸೀಸ್)