ನ್ಯೂಯಾರ್ಕ್: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವೂ ಗೆದ್ದು ಬೀಗಿದೆ. ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ತಡವಾಗಿ ಆರಂಭವಾಯಿತು. ಆದರೆ, ಕೊನೆಯ ಓವರ್ವರೆಗೂ ರೋಚಕ ಹೋರಾಟ ನಡೆಸಿದ ಟೀಮ್ ಇಂಡಿಯಾ 6 ರನ್‌ಗಳ ಅಲ್ಪ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು.
ಇಡೀ ವಿಶ್ವವೇ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗುತ್ತದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ವರುಣ ಕೊಂಚ ಬಿಡುವು ನೀಡಿದ್ದರಿಂದ ಪಂದ್ಯ ತಡವಾಗಿ ಆರಂಭವಾಯಿತು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಯಾರ್ಕ್ ಪಿಚ್ ಬ್ಯಾಟಿಂಗ್ಗೆ ಸಹಕರಿಸದ ಕಾರಣ ಪಾಕ್ ಬೌಲರ್ಗಳನ್ನು ಎದುರಿಸಲು ಭಾರತದ ಬ್ಯಾಟ್ಸ್ಮನ್ಗಳು ತಡಬಡಾಯಿಸಿ, ಪೆವಿಲಿಯನ್ ಸೇರಿದರು. ಪಾಕಿಸ್ತಾನದ ವಿರುದ್ಧ ತನ್ನ ವಿರಾಟ ರೂಪ ಪ್ರದರ್ಶಿಸುವ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ಮೊದಲ ವಿಕೆಟ್ ಒಪ್ಪಿಸಿ ಮರಳಿದರು.
ಆ ಬಳಿಕ ರೋಹಿತ್ (13), ಅಕ್ಷರ್ ಪಟೇಲ್ (20), ಸೂರ್ಯ (7), ದುಬೆ (3), ಪಾಂಡ್ಯ (7), ಜಡೇಜಾ (0) ದಯನೀಯವಾಗಿ ವಿಫಲರಾದರು. ರಿಷಭ್ ಪಂತ್‌ನಿಂದಾಗಿ ಭಾರತ 119 ರನ್ ಗಳಿಸಿತ್ತು. ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಪಂತ್ 31 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
ಪಾಕ್ ಬೌಲರ್ಗಳ ಪೈಕಿ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರು. ಆ ಬಳಿಕ 120 ರನ್‌ಗಳ ಸಣ್ಣ ಗುರಿಯೊಂದಿಗೆ ಕಣಕ್ಕೆ ಇಳಿದ ಪಾಕಿಸ್ತಾನ ಬ್ಯಾಟ್ಸ್ಮನ್ಗಳಿಗೆ ಟೀಮ್ ಇಂಡಿಯಾ ಬೌಲರ್ಗಳು ಶಾಕ್ ನೀಡಿದರು. 13 ರನ್ ಗಳಿಸಿದ್ದ ನಾಯಕ ಬಾಬರ್ ಅಜಮ್ರನ್ನು ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ಒಳ್ಳೆಯ ಬ್ರೇಕ್ ನೀಡಿದರು. ಆದರೆ, ಆ ಬಳಿಕ ಉಸ್ಮಾನ್ ಖಾನ್ (13) ಮತ್ತು ಫಕರ್ ಜಮಾನ್ (13) ಮೊಹಮ್ಮದ್ ರಿಜ್ವಾನ್ (31) ಜತೆಗೂಡಿ ಪಾಕಿಸ್ತಾನವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು.
ಉಸ್ಮಾನ್ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರೆ, ಫಕರ್ ಜಮಾನ್ ಅವರನ್ನು ಪಾಂಡ್ಯ ಪೆವಿಲಿಯನ್ಗೆ ಸೇರಿಸಿದರು. ಇದಾದ ಬಳಿಕ ಪಾಕಿಸ್ತಾನ ತಕ್ಷಣವೇ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಅರ್ಷದೀಪ್ ಅದ್ಭುತವಾಗಿ ಬೌಲಿಂಗ್ ಮಾಡಿ 11 ರನ್ ನೀಡಿ 1 ವಿಕೆಟ್ ಪಡೆದರು. ಇದರೊಂದಿಗೆ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ 6 ರನ್‌ಗಳ ಅಲ್ಪ ಅಂತರದಿಂದ ಸೋತಿತು.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಬೌಲರ್‌ಗಳಲ್ಲಿ ಮಿಂಚಿದರು. 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 3 ನಿರ್ಣಾಯಕ ವಿಕೆಟ್ ಪಡೆದರು. ಉಳಿದಂತೆ ಪಾಂಡ್ಯ 2, ಅರ್ಷದೀಪ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದು, ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. (ಏಜೆನ್ಸೀಸ್)