IND vs PAK Final: ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭಗೊಂಡಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾರೀ ಪೈಪೋಟಿಗೆ ಎದುರುನೋಡುತ್ತಿವೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಪಾಕ್ ಅನ್ನು ಮೂರನೇ ಬಾರಿಗೆ ಮಣಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿಗೆ ಮುತ್ತಿಡಲಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ: ಹೈಕೋರ್ಟ್ ಕದ ತಟ್ಟಿದ ಟಿವಿಕೆ ಮುಖ್ಯಸ್ಥ, ನಟ ದಳಪತಿ ವಿಜಯ್; ಯಾಕೆ ಗೊತ್ತಾ?| Thalapathy Vijay
"ಈ ಮೆಗಾ ಟೂರ್ನಿಯಲ್ಲಿ, ತಂಡದ ಪರ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮಾತ್ರ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ಹೊರತುಪಡಿಸಿ, ಉಳಿದೆಲ್ಲ ಆಟಗಾರರು ಸ್ಥಿರವಾಗಿ ಆಡುತ್ತಿರುವುದು ಕಂಡುಬಂದಿಲ್ಲ. ಕೊನೆ ಪಂದ್ಯದಲ್ಲಿ ಅಭಿಷೇಕ್ ಉತ್ತಮ ಪ್ರದರ್ಶನ ನೀಡಬೇಕು. ಅವರೊಟ್ಟಿಗೆ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟ್ ಬೀಸಬೇಕು" ಎಂದು ಒತ್ತಿ ಹೇಳಿದ್ದಾರೆ.
"ಭಾರತ ತಂಡದಲ್ಲಿ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲ ಅನೇಕ ಆಟಗಾರರಿದ್ದಾರೆ. ಸೂರ್ಯಕುಮಾರ್ ರನ್ ಗಳಿಸಲು ತೀರ ಹೆಣಗಾಡುತ್ತಿದ್ದಾರೆ. ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ದೊಡ್ಡ ಇನ್ನಿಂಗ್ಸ್ ನೀಡಬೇಕು. ಗಿಲ್ ಕೂಡ ಉತ್ತಮ ಆರಂಭ ಪಡೆಯುತ್ತಿದ್ದಾರೆ. ಈ ಫೈನಲ್ನಲ್ಲಿ ಅಭಿಷೇಕ್ ಶತಕ ಬಾರಿಸಬೇಕು. ಎರಡ್ಮೂರು ಬಾರಿ ಮೈಲಿಗಲ್ಲು ತಲುಪುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಆ ರೀತಿ ಆಗಬಾರದು" ಎಂದಿದ್ದಾರೆ.
"ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿ, ಟ್ರೋಫಿ ಎತ್ತಿಹಿಡಿಯಲಿದೆ. ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಭಾರತ ತಂಡವನ್ನು ತಡೆಯುವುದು ಪಾಕಿಸ್ತಾನಕ್ಕೆ ಸುಲಭವಿಲ್ಲ" ಎಂದು ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ,(ಏಜೆನ್ಸೀಸ್).