ಕ್ರೀಡೆ

ಕೊಹ್ಲಿ V/s ಕೇನ್; ಯಾರಿಗೆ ಚೊಚ್ಚಲ ಐಸಿಸಿ ಟ್ರೋಫಿ ಗೆಲುವಿನ ಅದೃಷ್ಟ?

ಸೌಥಾಂಪ್ಟನ್: ಕಳೆದ 7 ವರ್ಷಗಳಿಂದ ಟೀಮ್ ಇಂಡಿಯಾ ನಾಯಕರಾಗಿದ್ದರೂ ವಿರಾಟ್ ಕೊಹ್ಲಿ ಇದುವರೆಗೆ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್‌ಅಪ್ ಆಗಿದ್ದೇ ಶ್ರೇಷ್ಠ ಸಾಧನೆ. ಹೀಗಾಗಿ ಚೊಚ್ಚಲ ಐಸಿಸಿ ಟ್ರೋಫಿ ಒಲಿಸಿಕೊಳ್ಳಲು ಕೊಹ್ಲಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಅತ್ಯುತ್ತಮ ಅವಕಾಶ ಎದುರಾಗಿದೆ.

ಅತ್ತ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೂ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೈತಪ್ಪಿದ್ದ ಐಸಿಸಿ ಟ್ರೋಫಿಯನ್ನು ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಾದರೂ ಒಲಿಸಿಕೊಳ್ಳುವ ಅವಕಾಶವಿದೆ. ಪಂದ್ಯ ಡ್ರಾ ಆದರೆ ಇಬ್ಬರ ಪ್ರಶಸ್ತಿ ಬರವೂ ಜತೆಯಾಗಿ ನೀಗಲಿದೆ.

ಈಗಾಗಲೆ ಏಕದಿನ, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಜಯಿಸಿರುವ ಭಾರತಕ್ಕೆ ಎಲ್ಲ ಪ್ರಕಾರದಲ್ಲಿ ಐಸಿಸಿ ಟ್ರೋಫಿ ಗೆದ್ದ ಮೊದಲ ತಂಡವೆನಿಸುವ ಅವಕಾಶವಿದೆ. ಈಗಾಗಲೆ 2 ಏಕದಿನ ವಿಶ್ವಕಪ್ (1983, 2011), 2 ಚಾಂಪಿಯನ್ಸ್ ಟ್ರೋಫಿ (2002, 2013) ಮತ್ತು 1 ಟಿ20 ವಿಶ್ವಕಪ್ (2007) ಗೆದ್ದಿರುವ ಭಾರತಕ್ಕೆ 6ನೇ ಐಸಿಸಿ ಟ್ರೋಫಿ ಜಯಿಸುವ ಅವಕಾಶ ಇದಾಗಿದೆ.