IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2 ಅಂತರವನ್ನು ಕಾಯ್ದುಕೊಂಡಿದೆ. ಇದೇ ಈಗ ಸರಣಿಯ ರೋಚಕತೆಯನ್ನು ದುಪ್ಪಟ್ಟಾಗಿಸಿದೆ. ಜು.23ರಿಂದ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಗೆಲುವಿನ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಮುಂಗಾರು ಅಧಿವೇಶನ: ಆರಂಭದಲ್ಲೇ ವಿಪಕ್ಷಗಳ ಗದ್ದಲ, ಅಲ್ಪ ಸಮಯ ಮುಂದೂಡಿಕೆ ನಂತ್ರ ಕಲಾಪ ಪುನಾರಂಭ! Parliament Monsoon Session
ಕಳೆದ ಮೂರು ಟೆಸ್ಟ್ಗಳಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತ ತಂಡಕ್ಕೆ ಹಲವು ಸಮಸ್ಯೆಗಳು ಎದುರಾಗಿವೆ. ತಂಡದ ಉಪನಾಯಕ ರಿಷಭ್ ಪಂತ್ ಬೆರಳಿನ ಗಾಯದಿಂದಾಗಿ ಕೇವಲ ಬ್ಯಾಟಿಂಗ್ಗೆ ಮಾತ್ರ ಲಭ್ಯ ಎನ್ನುವಂತಾಗಿದೆ. ಹೀಗಾಗಿಯೇ ಟೀಮ್ ಮ್ಯಾನೇಜ್ಮೆಂಟ್ ಕೂಡ ಅವರ ಇಂಜುರಿಯನ್ನು ಗಮನದಲ್ಲಿರಿಸಿ, ಕೇವಲ ಬ್ಯಾಟಿಂಗ್ಗೆ ಪಂತ್ರನ್ನು ಇಳಿಸಲು ನಿರ್ಧರಿಸಿದೆ. ಈ ಮಧ್ಯೆ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಮುಂದಿನ ಎರಡು ಪಂದ್ಯಗಳಿಂದ ಕೈಬಿಡಲಾಗಿದೆ.
ಇನ್ನು ವೇಗಿ ಆರ್ಶ್‌ದೀಪ್ ಸಿಂಗ್ ಕೂಡ ಗಾಯದ ಸಮಸ್ಯೆಯಿಂದ ತಂಡಕ್ಕೆ ಅಲಭ್ಯವಾಗಿದ್ದಾರೆ. ಬೆಕೆನ್‌ಹ್ಯಾಮ್‌ನ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ವೇಳೆ ತಮ್ಮ ಎಡಗೈ ಬೆರಳಿಗೆ ಗಾಯ ಮಾಡಿಕೊಂಡ ಹಿನ್ನಲೆ ನಾಲ್ಕನೇ ಟೆಸ್ಟ್ನಿಂದ ಅವರನ್ನೂ ತಂಡದಿಂದ ಕೈಬಿಡಲಾಗಿದೆ. ಇನ್ನು ಅರ್ಶ್‌ದೀಪ್ ಸ್ಥಾನಕ್ಕೆ ಪೇಸ್ ಬೌಲಿಂಗ್ ಆಲ್‌ರೌಂಡರ್ ಅನ್ಶುಲ್ ಕಾಂಬೋಜ್ರನ್ನು ತರಲಾಗಿದೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಅನ್ಶುಲ್ ಕಾಂಬೋಜ್.