ಕ್ರೀಡೆ

5ನೇ ಟೆಸ್ಟ್​ಗೆ ಬಹುಮುಖ್ಯ ಬದಲಾವಣೆ; ತಂಡದಿಂದ ಇಬ್ಬರನ್ನು ಕೈಬಿಡಲು ಟೀಮ್ ಇಂಡಿಯಾ ಸಜ್ಜು? | IND vs ENG

ಮೋಹನ್​ ಶೆಟ್ಟಿ

IND vs ENG: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ, ನಾಲ್ಕನೇ ಪಂದ್ಯವನ್ನು ಡ್ರಾದಲ್ಲಿ ಅಂತ್ಯ ಕಾಣಿಸಿತು. ಇದೀಗ ಎರಡು ತಂಡಗಳಿಗೂ ಸವಾಲಿನ ಪರಿಸ್ಥಿತಿ ಎದುರಾಗಿದೆ. ಐದನೇ ಟೆಸ್ಟ್​ ಅನ್ನು ಏನಾದರೂ ಬೆನ್​ ಸ್ಟೋಕ್ಸ್​ ಪಡೆ ಗೆದ್ದರೆ, ಈ ಸರಣಿಯನ್ನು ಇಂಗ್ಲೆಂಡ್​ ವಶಪಡಿಸಿಕೊಳ್ಳಲಿದೆ. ಅದೇ ಭಾರತ ಗೆದ್ದರೆ, ಇಡೀ ಸರಣಿಯೇ ಡ್ರಾ ಆಗಲಿದೆ. ಹೀಗಿರುವಾಗಲೇ, ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳು ಕೇಳಿಬಂದಿವೆ.

ಓವಲ್ ಮೈದಾನದಲ್ಲಿ ನಡೆಯಲಿರುವ ಐದನೇ ಪಂದ್ಯವನ್ನು ಗೆದ್ದು, 2-2 ಅಂತರದಲ್ಲಿ ಸರಣಿ ಡ್ರಾ ಮಾಡಲು ಟೀಮ್ ಇಂಡಿಯಾ ಎದುರುನೋಡುತ್ತಿದೆ. ಕಳೆದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ವಿಫಲರಾದ ವೇಗಿ ಶಾರ್ದೂಲ್ ಠಾಕೂರ್​ರನ್ನು ಕೈಬಿಡಲು ಟೀಮ್ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಅವರ ಸ್ಥಾನಕ್ಕೆ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇದೇ ವೇಳೆ ತನ್ನ ಚೊಚ್ಚಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಬೌಲರ್​ ಅನ್ಶುಲ್ ಕಾಂಬೋಜ್ ಕೂಡ ಓವಲ್ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೌಲಿಂಗ್​ನಲ್ಲಿ ಕಮಾಲ್​ ಮಾಡಲು ವಿಫಲರಾದ ಕಾಂಬೋಜ್ ಬದಲಿಗೆ ಆಕಾಶ್ ದೀಪ್ ಅಥವಾ ಪ್ರಸಿದ್ಧ್ ಕೃಷ್ಣಾಗೆ ಸ್ಥಾನ ಕೊಡಲು ಹೆಡ್​ ಕೋಚ್​ ಗೌತಮ್​ ​ ಗಂಭೀರ್ ಮುಂದಾಗಿದ್ದಾರೆ ಎನ್ನಲಾಗಿದೆ. ಬುಮ್ರಾರನ್ನು ಅಂತಿಮ ಟೆಸ್ಟ್‌ನಲ್ಲಿ ಆಡಿಸಲಾಗುತ್ತದೆಯೇ ಅಥವಾ ವಿಶ್ರಾಂತಿ ಮುಂದುವರಿಸಲು ಬಿಡಲಾಗುವುದೇ? ಎಂಬ ಪ್ರಶ್ನೆ ಇನ್ನೂ ಚರ್ಚೆಯಲ್ಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ಐದನೇ ಟೆಸ್ಟ್‌ಗೆ ತಮ್ಮ ತಂಡವನ್ನು ಈಗಾಗಲೇ ಘೋಷಿಸಿದೆ.