ಕ್ರೀಡೆ

IND vs ENG 2nd ODI | ಇಂಗ್ಲೆಂಡ್ ವಿರುದ್ಧ ಅಬ್ಬರಿಸಲು 'ಕಿಂಗ್' ಕೊಹ್ಲಿ ಸಜ್ಜು! ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

IND vs ENG: ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದ ಟೀಮ್ ಇಂಡಿಯಾ, ಈಗ ಎರಡನೇ ಮ್ಯಾಚ್​ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಮೊಣಕಾಲಿನ ನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದ ಮಾಜಿ ಕ್ಯಾಪ್ಟನ್​, ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ, ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ದೃಢಪಡಿಸಿದ್ದಾರೆ.

ಭಾನುವಾರ (ಫೆ.09) ಬರ್ಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನಾಡಲು ಮೈದಾನದಲ್ಲಿ ಬೆವರಿಳಿಸಿತ್ತಿರುವ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಪರ ಆಡಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಭಾರತದ ಪುರುಷರ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ದೃಢಪಡಿಸಿದ್ದಾರೆ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಅವರನ್ನು ಮೊದಲ ಪಂದ್ಯದಿಂದ ಕೈಬಿಡಲಾಗಿತ್ತು. ಆದ್ರೆ, ಈಗ ತಮ್ಮ ಅಭಿಮಾನಿಗಳನ್ನು ರಂಜಿಸಲು ಅಖಾಡಕ್ಕಿಳಿಯಲಿದ್ದಾರೆ ಎಂದು ಕೋಚ್ ಮಾಹಿತಿ ನೀಡಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿ ಗೆದ್ದ ಭಾರತ, ಮೂರು ಏಕದಿನ ಸರಣಿಯಲ್ಲಿ ನಾಲ್ಕು ವಿಕೆಟ್‌ಗಳಿಂದ ಮೊದಲ ಪಂದ್ಯ ಗೆದ್ದು ಬೀಗಿತು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಸದ್ಯ ಭಾರತ ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಬ್ಬರ ಹೇಗಿರಲಿದೆ? ನಿರೀಕ್ಷೆಗೆ ತಕ್ಕಂತೆ ಇಂಗ್ಲೆಂಡ್​ ವಿರುದ್ಧ ವಿರಾಟ್​ ಆರ್ಭಟಿಸಲಿದ್ದಾರಾ ಅಥವಾ ಎಂದಿನಂತೆ ಕಳಪೆ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಲಿದ್ದಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).