ಕ್ರೀಡೆ

ನಾಳೆ ಕೊನೆ ಏಕದಿನ ಪಂದ್ಯ: ಭಾರತಕ್ಕೆ ಕ್ಲೀನ್​ ಸ್ವೀಪ್​ ಚಿಂತೆ! ಶತಕ, ದಾಖಲೆಯತ್ತ ರೋಹಿತ್ | IND vs AUS

IND vs AUS ODI: ಪ್ರಸಕ್ತ ಆತಿಥೇಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರು ಏಕದಿನ ಪಂದ್ಯಗಳ ಪೈಕಿ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ, ನಾಳೆ (ಅ.25) ಸಿಡ್ನಿಯಲ್ಲಿ ನಡೆಯಲಿರುವ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಅದು ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳಲು ಎಂಬುದು ಗಮನಾರ್ಹ.

ಆಸೀಸ್​ ವಿರುದ್ಧ ಭಾರತ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಕೈಚೆಲ್ಲಿರುವ ಗಿಲ್ ಪಡೆ, ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಪಾಲಾಗಿಸಿದೆ. ಟೀಮ್ ಇಂಡಿಯಾ ಕನಿಷ್ಠ ಮೂರನೇ ಏಕದಿನ ಪಂದ್ಯವನ್ನು ಗೆದ್ದು, ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳಬೇಕಿದೆ. ಆದಾಗ್ಯೂ, ಸಿಡ್ನಿ ಮೈದಾನದಲ್ಲಿ ಆಸೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿನ ದಾಖಲೆಯು ಈಗ ಟೀಮ್ ಇಂಡಿಯಾಗೆ ಕಷ್ಟಸಾಧ್ಯ ಎನ್ನುವಂತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ 19 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅವುಗಳಲ್ಲಿ ಆಸೀಸ್​ 16 ಪಂದ್ಯಗಳನ್ನು ಗೆದ್ದಿದೆ. ಭಾರತ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾ ಆಗಿತ್ತು. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಗೆದ್ದಿದ್ದು 2016ರಲ್ಲಿ. ಆ ಪಂದ್ಯದಲ್ಲಿ, ಆಸೀಸ್ 330 ರನ್ ಗಳಿಸಿತ್ತು. ಆದರೆ, ಭಾರತ ತಂಡವು 49.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ಬೆನ್ನಟ್ಟಿತು.

ಅಂದು ಭಾರತ ಪರ ಮನೀಶ್ ಪಾಂಡೆ (104) ಅಜೇಯ ಶತಕ ಗಳಿಸಿದರೆ, ರೋಹಿತ್ ಶರ್ಮಾ (99) ಒಂದೇ ಒಂದು ರನ್​ನಿಂದ ಶತಕ ವಂಚಿತರಾದರು. ಆದರೆ, ನಾಳೆ ನಡೆಯಲಿರುವ ಕೊನೆ ಪಂದ್ಯದಲ್ಲಿ ರೋಹಿತ್​ ಮತ್ತೊಮ್ಮೆ ಆಸೀಸ್​ ನೆಲದಲ್ಲಿ ಸೆಂಚುರಿ ಬಾರಿಸಲಿದ್ದಾರೆ ಎಂಬ ಭರವಸೆಗಳು ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ.